ಮಂಡ್ಯ: ಬೆಟ್ಟದ ಮೇಲೆ ಜಲಮೂಲ ಸೃಷ್ಟಿಸಿ ಆಧುನಿಕ ಭಗೀರಥ ಎನಿಸಿಕೊಂಡಿರುವ ಕಾಮೇಗೌಡರು ಇನ್ನಿಲ್ಲ. ಕೆರೆ ನಿರ್ಮಾತೃ ಖ್ಯಾತಿಯ ಕಾಮೇಗೌಡ ಅವರು ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಳವಳ್ಳಿಯ ಕಲ್ಮನೆ ಕಾಮೇಗೌಡರು (81)ಇಂದು ಕೊನೆಯುಸಿರೆಳೆದಿದ್ದಾರೆ.
ಪ್ರಧಾನಿಯಿಂದ ಪ್ರಶಂಸೆ ಪಡೆದಿದ್ದ ‘ಪಾಂಡ್ ಮ್ಯಾನ್’:
ಅಂತರ್ಜಲ ವೃದ್ಧಿ ಸಂಬಂಧ ಕುಂದೂರು ಬೆಟ್ಟದಲ್ಲಿ ಸುಮಾರು 16 ಕೆರೆಗಳನ್ನು ನಿರ್ಮಿಸಿರುವ ಕಾಮೇಗೌಡರು ‘ಆಧುನಿಕ ಭಗೀರಥ’ ಎಂದೇ ಖ್ಯಾತಿ ಪಡೆದಿದ್ದರು. ಅವರ ಈ ಸಾಧನೆಗಾಗಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರತಿಷ್ಠಿತ ಬಸವ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳಿಗೂ ಅವರು ಭಾಜನರಾಗಿದ್ದರು. ಕೆರೆ ನಿರ್ಮಾಣದ ಇವರ ಮಹಾತ್ಕಾರ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಕೊಂಡಾಡಿದ್ದು ಇವರನ್ನು ಮಾದರಿ ವ್ಯಕ್ತಿ ಎಂದು ಬಣ್ಣಿಸಿದ್ದರು. 2020ರ ಜೂನ್ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕೆರೆ ಕಾಮೇಗೌಡರ ಸಾಧನೆಗಳನ್ನು ಹಾಡಿ ಹೊಗಳಿದ್ದರು. ಕಾಮೇಗೌಡರ ಬಗ್ಗೆ ಪ್ರಧಾನಿಯವರು ಎಷ್ಟು ಪ್ರಭಾವಿತರಾಗಿದ್ದರು ಎಂದರೆ, ‘ಈ ಧೀಮಂತ ವ್ಯಕ್ತಿಯನ್ನು ಖುದ್ದು ಭೇಟಿಯಾಗುವೆ’ ಎಂದು ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಪ್ರಧಾನಿಯವರ ಈ ಮಾತುಗಳಿಂದ ಮಾದ್ಯಮ ಕ್ಷೇತ್ರದ ದಿಗ್ಗಜರು ಕೂಡಾ ಪ್ರಭಾವಿತರಾಗಿದ್ದರು. ದೇಶ ವಿದೇಶಗಳ ಮಾಧ್ಯಮಗಳು ಕೆರೆ ಕಾಮೇಗೌಡರ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ. ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಇವರ ಸಾಧನೆ ಅನಾವರಣವಾದ ಬಳಿಕ ಅನೇಕರು ಇವರ ಬಗ್ಗೆ ಸಾಕ್ಷ್ಯ ಚಿತ್ರ, ಕಿರುಚಿತ್ರಗಳನ್ನೂ ನಿರ್ಮಿಸಲು ಮುಂದಾದರು.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಮನೆ ಕಾಮೇಗೌಡರು ದಾಸನದೊಡ್ಡಿಯಲ್ಲಿರುವ ತಮ್ಮ ನಿವಾಸದಲ್ಲಿ ಕಾಮೇಗೌಡರು ಕೊನೆಯುಸಿರೆಳೆದಿದ್ದಾರೆ.







































































