ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಜಾಗತಿಕ ಸಂಪರ್ಕ ಕಾರ್ಯಕ್ರಮದ ಕೊನೆಯ ಹಂತವಾಗಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು 7ರವರೆಗೆ ಲಂಡನ್ ಪ್ರವಾಸ ಕೈಗೊಂಡಿದ್ದಾರೆ.
ಆರ್ಎಸ್ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಶುಕ್ರವಾರ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಡಾ. ಕೇಶವ ಬಲಿರಾಮ ಹೆಡ್ಗೆವಾರ್ ಅವರು 1925ರಲ್ಲಿ ಸ್ಥಾಪಿಸಿದ ಸಂಘ 100 ವರ್ಷಗಳ ಚಟುವಟಿಕೆಗಳನ್ನು ಪೂರ್ಣಗೊಳಿಸಿದೆ. ಹಿಂದೂ ನಾಗರಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯಗಳನ್ನು ಆಧರಿಸಿ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

2025-26ನೇ ಸಾಲಿನ ವಾರ್ಷಿಕ ವರದಿಯಲ್ಲಿ ದೇಶಾದ್ಯಂತ ಶಿಕ್ಷಣ, ಆರೋಗ್ಯ, ಸಾಮಾಜಿಕ ಕಲ್ಯಾಣ ಹಾಗೂ ಸ್ವಾವಲಂಬನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 1.52 ಲಕ್ಷಕ್ಕೂ ಅಧಿಕ ಸೇವಾ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ಆರ್ಎಸ್ಎಸ್ ಹೇಳಿದೆ. ದೈನಂದಿನ ಶಾಖೆಗಳು, ಸಾಪ್ತಾಹಿಕ ಹಾಗೂ ಮಾಸಿಕ ಸಭೆಗಳು ಸೇರಿದಂತೆ 1.34 ಲಕ್ಷಕ್ಕೂ ಅಧಿಕ ನಿಯಮಿತ ಸ್ಥಳೀಯ ಚಟುವಟಿಕೆಗಳಿವೆ ಎಂದು ತಿಳಿಸಿದೆ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಸಾಮಾಜಿಕ ಸಾಮರಸ್ಯ, ಕುಟುಂಬ ಮೌಲ್ಯಗಳ ಬಲವರ್ಧನೆ, ಪರಿಸರ ಸಂರಕ್ಷಣೆ, ಸ್ವಾವಲಂಬನೆ ಹಾಗೂ ನಾಗರಿಕ ಜವಾಬ್ದಾರಿ ಎಂಬ ಐದು ಪ್ರಮುಖ ಆದ್ಯತೆಗಳಿಗೆ ಒತ್ತು ನೀಡಲಾಗಿದೆ ಎಂದು ಸುನಿಲ್ ಅಂಬೇಕರ್ ತಿಳಿಸಿದ್ದಾರೆ.

ವಿದೇಶಗಳಲ್ಲಿ ಜಾಗತಿಕ ಸಂಪರ್ಕ
ಶತಮಾನೋತ್ಸವದ ಅಂಗವಾಗಿ ವಿದೇಶಗಳಲ್ಲಿಯೂ ವಿವಿಧ ಸಮುದಾಯಗಳು ಮತ್ತು ಸಂಸ್ಥೆಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ವಿಸ್ತರಿಸಲಾಗಿದೆ. ಏಪ್ರಿಲ್ನಲ್ಲಿ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಬ್ರಿಟನ್, ಅಮೆರಿಕ ಹಾಗೂ ಜರ್ಮನಿಗೆ ಭೇಟಿ ನೀಡಿ ಶಿಕ್ಷಣ ತಜ್ಞರು, ಸಂಸದರು, ಉದ್ಯಮಿಗಳು ಹಾಗೂ ಭಾರತೀಯ ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ್ದರು.
ಬಳಿಕ ಮೋಹನ್ ಭಾಗವತ್ ಅವರು ನ್ಯೂಯಾರ್ಕ್ ಮತ್ತು ಟೊರೊಂಟೊದಲ್ಲೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆಗಸ್ಟ್ 29ರಂದು ನ್ಯೂಯಾರ್ಕ್ನಲ್ಲಿ ನಡೆದ ಬಹುಧರ್ಮೀಯ ನಾಯಕರ ಸಭೆಯಲ್ಲಿ 175 ಮಂದಿ ಪಾಲ್ಗೊಂಡಿದ್ದರು. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆದ ‘ಯುನಿವರ್ಸಲ್ ಒನ್ನೆಸ್’ ಸಮ್ಮೇಳನದಲ್ಲಿ 6,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಸುನಿಲ್ ಅಂಬೇಕರ್ ತಿಳಿಸಿದ್ದಾರೆ
ಟೊರೊಂಟೊದಲ್ಲಿ ನಡೆದ ‘ಹಿಂದು ವಿಶ್ವ ಬಂಧು’ ಸಮ್ಮೇಳನದಲ್ಲಿ ಕೆನಡಾದ ವಿವಿಧ ಭಾಗಗಳ 175 ಸಂಘಟನೆಗಳ 2,000ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಸೆ.6ರಂದು ‘ಸೆಲೆಬ್ರೇಷನ್ ಆಫ್ ಒನ್ನೆಸ್’
ಲಂಡನ್ ಪ್ರವಾಸವು ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಮೂರು ನಗರಗಳ ಜಾಗತಿಕ ಸಂಪರ್ಕ ಕಾರ್ಯಕ್ರಮದ ಕೊನೆಯ ಹಂತವಾಗಿದೆ. ಬ್ರಿಟನ್ ಮೂಲದ ‘ಇಂಟಿಗ್ರಲ್’ ಸಂಸ್ಥೆ ಕಾರ್ಯಕ್ರಮವನ್ನು ಸಂಯೋಜಿಸುತ್ತಿದ್ದು, 115ಕ್ಕೂ ಅಧಿಕ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು ಸಹಕಾರ ನೀಡುತ್ತಿವೆ.
ಪ್ರವಾಸದ ವೇಳೆ ಮೋಹನ್ ಭಾಗವತ್ ಅವರು ಧಾರ್ಮಿಕ ಮುಖಂಡರು, ಶಿಕ್ಷಣ ತಜ್ಞರು ಹಾಗೂ ಸಂಶೋಧಕರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ವಿಲ್ಲೆಸ್ಡನ್ನ ಶ್ರೀ ಸ್ವಾಮಿನಾರಾಯಣ ದೇವಸ್ಥಾನ ಹಾಗೂ ಖಾಲ್ಸಾ ಜಠಾ ಬ್ರಿಟಿಷ್ ಐಲ್ಸ್ ಗುರುದ್ವಾರಕ್ಕೆ ಭೇಟಿ ನೀಡಿರುವ ಅವರು ಜೈನ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ.
ಸೆಪ್ಟೆಂಬರ್ 6ರಂದು ‘ಸೆಲೆಬ್ರೇಷನ್ ಆಫ್ ಒನ್ನೆಸ್’ ಎಂಬ ವಿಷಯದಡಿ ಸಮುದಾಯ ನಾಯಕರ ಸನ್ಮಾನ ಹಾಗೂ ನಾಗರಿಕತಾ ಸಂವಾದ ಕಾರ್ಯಕ್ರಮ ನಡೆಯಲಿದೆ. ಹಿಂದೂ ಸ್ವಯಂಸೇವಕ ಸಂಘ ಯುಕೆ, ಇಂಟಿಗ್ರಲ್ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 310ಕ್ಕೂ ಅಧಿಕ ಸಮುದಾಯ ಸಂಘಟನೆಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ನಿಸ್ವಾರ್ಥ ಸೇವೆ, ಸಾಮಾಜಿಕ ಸಾಮರಸ್ಯ ಹಾಗೂ ‘ವಸುದೈವ ಕುಟುಂಬಕಂ’—‘ಜಗತ್ತೇ ಒಂದು ಕುಟುಂಬ’ ಎಂಬ ಸಂದೇಶವನ್ನು ಲಂಡನ್ ಕಾರ್ಯಕ್ರಮದ ಮೂಲಕ ಮುಂದುವರಿಸಲಾಗುವುದು ಎಂದು ಸುನಿಲ್ ಅಂಬೇಕರ್ ತಿಳಿಸಿದ್ದಾರೆ







































































