ಬಾಗಲಕೋಟೆ: ಬೀಳಗಿ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ. ನೂರಕ್ಕೆ ನೂರು ಬೀಳಗಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವುದೇ ರೂಮರ್ಸ್ ಗೆ ಕಿವಿಗೊಡಬೇಡಿ ಎಂದು ಬಾಗಲಕೋಟೆಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸ್ಪಷ್ಟಪಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿನ ಸ್ಪರ್ದೆ ಕುರಿತ ವಿಚಾರ ಬಗ್ಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ತನ್ನನ್ನು ಎಂಎಲ್ಎ ಮಾಡಿದವರು ಬೀಳಗಿ ಕ್ಷೇತ್ರದ ಜನ. ನಾನು ಮಂತ್ರಿ ಆಗಿದ್ದು ಬೀಳಗಿ ಮತ ಕ್ಷೇತ್ರದಿಂದ. ಹಾಗಾಗಿ ಕೊನೆವರೆಗೂ ಬೀಳಗಿಯಲ್ಲೇ ಇರ್ತೇನೆ. ಯಾವುದೇ ಸಂಶಯ ಬೇಡ ಎಂದು ಹೇಳಿದರು. ನಿರಾಣಿ ಅವರು ಜಮಖಂಡಿ ಕ್ಷೇತ್ರಕ್ಕೆ ಹೋಗ್ತಿದ್ದಾರೆ ಎನ್ನುವ ಸುದ್ದಿಗೆ ಸ್ಪಷ್ಟನೆ ನೀಡಿದ ಸಚಿವರು ‘ನಾನು ಬೀಳಗಿ ಮತ ಕ್ಷೇತ್ರ ಬಿಟ್ಟು ಬೇರೆ ಎಲ್ಲೂ ಹೋಗಲ್ಲ’ ಎಂದರು.
ನಿರಾಣಿ ಕುಟುಂಬದಿಂದ ಅವರ ಸಹೋದರ ಸಂಗಮೇಶ್ ನಿರಾಣಿ ಸ್ಪರ್ಧೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಕುಟುಂಬದಲ್ಲಿ ಒಬ್ಬರೆ ಸ್ಪರ್ಧೆ ಮಾಡುತ್ತಾರೆ. ನೂರಕ್ಕೆ ನೂರರಷ್ಟು ಹೇಳುತ್ತೇನೆ. ಕುಟುಂಬದಿಂದ ಒಬ್ಬರು ಮಾತ್ರ ಸ್ಪರ್ಧೆ ಮಾಡುತ್ತಾರೆ’ ಎಂದರು. ‘ಒಂದು ವೇಳೆ ಮುಂದಿನ ಸಲ ನಮ್ಮ ಕುಟುಂಬದಿಂದ ಬೇರೆ ಯಾರಾದ್ರೂ ಸ್ಪರ್ಧೆ ಮಾಡಿದ್ರೆ ನಾನು ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಸ್ಪಷ್ಟಪಡಿಸಿದರು.
‘ನಮ್ಮ ಕುಟುಂಬದಲ್ಲಿ ಎಂದು ಮತ್ತೊಬ್ಬ ತಯಾರು ಆಗುತ್ತಾನೋ ಅಂದು ರಾಜಕೀಯದಿಂದ ದೂರ ಉಳಿಯುತ್ತೇನೆ. ನಾನು ಸ್ಪರ್ಧೆ ಮಾಡಲ್ಲ’ ಎಂದು ಹೇಳಿದರು. ಕಳೆದ ಚುನಾವಣೆಯಲ್ಲಿ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಜಮಖಂಡಿಯಲ್ಲಿ ಬಂಡಾಯ ಅಭ್ಯರ್ಥಿ ಆಗಿದ್ದರು. ಈ ಸಲ ತೇರದಾಳ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎನ್ನುವ ಸುದ್ದಿ ಹಿನ್ನಲೆಯಲ್ಲಿ ಸಹೋದರ ಸ್ಪರ್ಧೆ ಕುರಿತು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನವರು ಹಿಂದೆ ಕೂಡ ಹಲವು ಪಾದಯಾತ್ರೆ ಮಾಡಿದ್ದಾರೆ, ಇವತ್ತು ಕೂಡ ಕಾಂಗ್ರೆಸ್ ನವರು ಮಾಡ್ತಿದಾರೆ. ರಾಜಕೀಯ ಪಕ್ಷಗಳಿಗೆ ವಿಪಕ್ಷದಲ್ಲಿದ್ದಾಗ ಇಂತವುಗಳು ಮಾಡೋದು ಸಾಮಾನ್ಯ ಎಂದು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕಿಸಿದ ನಿರಾಣಿ, ಈ ಹಿಂದೆ ಕೃಷ್ಣೆಯ ಕಣ್ಣೀರು ಅಂತಾ ಯಾತ್ರೆ ಮಾಡಿದ್ರು. ಅದರ ಕುರಿತು ಪುಸ್ತಕ ಕೂಡಾ ಬರೆದಿದ್ದರು. ಆದ್ರೆ ಅಧಿಕಾರಕ್ಕೆ ಬಂದಾಗ ಕೃಷ್ಣೆಗೆ ಎಷ್ಟು ದುಡ್ಡು ಕೊಟ್ರು ಎಂದು ಪ್ರಶ್ನೆ ಮಾಡಿದರು.
ಅಹಿಂದ, ಅಹಿಂದ ಅಂತಾ ದೊಡ್ಡ ದೊಡ್ಡ ಮಾತುಗಳನ್ನಾಡ್ತಾರೆ. ಅವುಗಳಿಗೆ ಎಷ್ಟು ಮೀಸಲಾತಿ ಕೊಟ್ಟಿದ್ದಾರೆ ಎಂದರು. ೩% ಯಿಂದ ೭%, ೧೫% ಯಿಂದ ೧೭% ಯಾಕೆ ವಿಸ್ತರಿಸಲಿಲ್ಲ. ಹೋರಾಟ ಮಾಡ್ತಾರೆ ಅದು ಅವರಿಗೆ ನೆನಪಿರಬೇಕಲ್ವ ಎಂದರು. ಕಾಂಗ್ರೆಸ್ ಗಿಂತ ಹೆಚ್ಚು ಹಿಂದುಳಿದವರಿಗೆ ಹೆಚ್ಚು ಸಪೋರ್ಟ್ ಆಗಿರುವುದೇ ಬಿಜೆಪಿ ಸರ್ಕಾರದಿಂದ ಎಂದರು. ಇನ್ನೂ, ಹಿಂದುಳಿದವರು ಅತೀ ಹೆಚ್ಚು ಆಯ್ಕೆಯಾಗಿ ಬರುವವರು ಬಿಜೆಪಿಯಿಂದಲೇ ಎಂದರು. ನೀವು ಬೇಕಾದ್ರೆ ಅಂಕಿ-ಸಂಖ್ಯೆ ತಗೊಳ್ಳಿ. ಎಸ್ಸಿ, ಎಸ್ಟಿ, ಹಿಂದುಳಿದವ್ರು ಹೆಚ್ಚು ಇರುವುದೇ ಬಿಜೆಪಿ ಪಕ್ಷದಲ್ಲಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.





















































