ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರಿಗೆ ಸೆಪ್ಟೆಂಬರ್ 24ರಂದು ವೈಟ್ಹೌಸ್ನಲ್ಲಿ ರಾಜ್ಯ ಔತಣಕೂಟ ಆಯೋಜಿಸುವುದಾಗಿ ತಿಳಿಸಿದ್ದಾರೆ.
2016ರ ಬಳಿಕ ಇದೇ ಮೊದಲ ಬಾರಿಗೆ ಷಿ ಜಿನ್ಪಿಂಗ್ ವಾಷಿಂಗ್ಟನ್ಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧ, ವ್ಯಾಪಾರ ಹಾಗೂ ಹಲವು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.

ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಷಿ ಜಿನ್ಪಿಂಗ್ ಅವರನ್ನು ‘ಉತ್ತಮ ವ್ಯಕ್ತಿ’ ಎಂದು ಬಣ್ಣಿಸಿದರು. ಅಮೆರಿಕಾ ಮತ್ತು ಚೀನಾ ಪರಸ್ಪರ ಸ್ಪರ್ಧಿಗಳಾಗಿದ್ದರೂ ಎರಡೂ ದೇಶಗಳ ನಡುವೆ ಉತ್ತಮ ವ್ಯಾಪಾರ ಸಂಬಂಧವಿದೆ ಎಂದರು.
“ಅವರ ಭೇಟಿಯನ್ನು ಎದುರು ನೋಡುತ್ತಿದ್ದೇವೆ. ಅಧ್ಯಕ್ಷ ಷಿ ಅವರೊಂದಿಗೆ ನಮಗೆ ಉತ್ತಮ ಸಂಬಂಧವಿದೆ. ಚೀನಾದೊಂದಿಗೆ ಉತ್ತಮ ಕೆಲಸಗಳನ್ನು ಮಾಡಲು ಬಯಸುತ್ತೇವೆ” ಎಂದು ಟ್ರಂಪ್ ಹೇಳಿದರು.
ಇದೇ ವೇಳೆ ಇರಾನ್ನಲ್ಲಿನ ಸಂಘರ್ಷದ ಕುರಿತು ಮಾತನಾಡಿದ ಟ್ರಂಪ್, ಅದನ್ನು ಅಮೆರಿಕಕ್ಕೆ ‘ಸಣ್ಣ ವಿಚಾರ’ ಎಂದು ಬಣ್ಣಿಸಿದರು. ಈ ಸಂಘರ್ಷವನ್ನು ಯುದ್ಧ ಎನ್ನುವುದಕ್ಕಿಂತ ಸೇನಾ ಸಂಘರ್ಷ ಎಂದು ಕರೆಯಬಹುದು ಎಂದು ಹೇಳಿದರು. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ನಿಲುವನ್ನು ತಾವು ಅರ್ಥಮಾಡಿಕೊಂಡಿರುವುದಾಗಿ ತಿಳಿಸಿದರು.
ಇನ್ನು, ಕತಾರ್ ನೀಡಿರುವ ಹೊಸ ಏರ್ ಫೋರ್ಸ್ ಒನ್ ವಿಮಾನದ ನವೀಕರಣ ಕಾಮಗಾರಿ ಅಕ್ಟೋಬರ್ನಲ್ಲಿ ಆರಂಭವಾಗಲಿದೆ. ಕಾಮಗಾರಿ ಪೂರ್ಣಗೊಳ್ಳಲು ಸುಮಾರು 60 ದಿನಗಳು ಬೇಕಾಗಬಹುದು ಎಂದು ಟ್ರಂಪ್ ತಿಳಿಸಿದರು.







































































