ನವದೆಹಲಿ: ದಕ್ಷಿಣ ಏಷ್ಯಾದ ಜನರ ಕರುಳಿನ ಸೂಕ್ಷ್ಮಜೀವಿಗಳು (Gut Microbiome) ವಿಶ್ವದ ಇತರ ಭಾಗಗಳ ಜನರಿಗಿಂತ ಗಮನಾರ್ಹವಾಗಿ ಭಿನ್ನವಾಗಿವೆ ಎಂದು ಹೊಸ ಅಧ್ಯಯನ ತಿಳಿಸಿದೆ. ಸ್ಥಳೀಯ ಆಹಾರ ಪದ್ಧತಿ, ಸಂಸ್ಕೃತಿ, ಭೌಗೋಳಿಕತೆ ಮತ್ತು ಜೀವನಶೈಲಿ ಈ ಸೂಕ್ಷ್ಮಜೀವಿಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಭಾರತ ಮತ್ತು ಶ್ರೀಲಂಕಾದ 10 ಸಮುದಾಯಗಳ 575 ಆರೋಗ್ಯವಂತ ವಯಸ್ಕರ ಮಲ ಮಾದರಿಗಳು, ಆಹಾರ ಪದ್ಧತಿ, ಆರೋಗ್ಯ ಮತ್ತು ಜೀವನಶೈಲಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ದಕ್ಷಿಣ ಏಷ್ಯಾದ ಮೈಕ್ರೋಬಯೋಮ್ ARray (SAMBAR) ಬಳಸಿ ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ಕರುಳಿನ ಸೂಕ್ಷ್ಮಜೀವಿಗಳನ್ನು ಹೋಲಿಕೆ ಮಾಡಲಾಗಿದೆ.

ನಗರೀಕರಣದಿಂದ ಸೂಕ್ಷ್ಮಜೀವಿಗಳಲ್ಲೂ ಬದಲಾವಣೆ
ಪ್ರತಿಯೊಂದು ಸಮುದಾಯವೂ ಜೀವನಶೈಲಿಯ ಬದಲಾವಣೆಗೆ ಅನುಗುಣವಾಗಿ ವಿಶಿಷ್ಟ ಸೂಕ್ಷ್ಮಜೀವಿ ಮಾದರಿಯನ್ನು ಹೊಂದಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ನಗರೀಕರಣವು ಚಯಾಪಚಯ ಆರೋಗ್ಯಕ್ಕೆ ಸಂಬಂಧಿಸಿದ ಕರುಳಿನ ಸೂಕ್ಷ್ಮಜೀವಿಗಳ ಬದಲಾವಣೆಯೊಂದಿಗೆ ಸಂಬಂಧ ಹೊಂದಿರುವುದು ಪತ್ತೆಯಾಗಿದೆ.
ಬಿರ್ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೊಸೈನ್ಸಸ್ (BSIP), ಚಿಕಾಗೋ ವಿಶ್ವವಿದ್ಯಾಲಯ ಹಾಗೂ ಭಾರತ, ಶ್ರೀಲಂಕಾ ಮತ್ತು ಅಮೆರಿಕದ ವಿವಿಧ ಸಂಸ್ಥೆಗಳ ಸಂಶೋಧಕರು ಡಾ. ನೀರಜ್ ರೈ ನೇತೃತ್ವದಲ್ಲಿ ಅಧ್ಯಯನ ನಡೆಸಿದ್ದಾರೆ. Gut Microbes ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಆರೋಗ್ಯವಂತ ಭಾರತೀಯ ಜನಸಂಖ್ಯೆಯ ಕರುಳಿನ ಸೂಕ್ಷ್ಮಜೀವಿಗಳ ಕುರಿತ ಮೂಲ ಮಾಹಿತಿಯನ್ನು ಒದಗಿಸುತ್ತದೆ.
ಭವಿಷ್ಯದಲ್ಲಿ ವೈಯಕ್ತಿಕಗೊಳಿಸಿದ ಪೋಷಣೆ, ಮೈಕ್ರೋಬಯೋಮ್ ಆಧಾರಿತ ರೋಗನಿರ್ಣಯ ಮತ್ತು ನಿಖರ ಆರೋಗ್ಯ ಸೇವೆ ಅಭಿವೃದ್ಧಿಗೆ ಈ ಸಂಶೋಧನೆ ನೆರವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಮಧುಮೇಹ, ಬೊಜ್ಜು, ಹೃದಯರಕ್ತನಾಳದ ಕಾಯಿಲೆ ಸೇರಿದಂತೆ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಕುರಿತು ಮುಂದಿನ ಸಂಶೋಧನೆಗಳಿಗೂ SAMBAR ಸಂಪನ್ಮೂಲ ಪ್ರಮುಖ ಆಧಾರವಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.






































































