ನವದೆಹಲಿ: ಪ್ಯಾರಿಸ್‌ನಲ್ಲಿರುವ ಭವ್ಯ ಸ್ವಾಮಿನಾರಾಯಣ ಹಿಂದೂ ದೇವಾಲಯವು ಭಾರತ-ಫ್ರಾನ್ಸ್ ನಡುವಿನ ಸಾಂಸ್ಕೃತಿಕ ಸಂಬಂಧಕ್ಕೆ ಹೊಸ ಅಧ್ಯಾಯ ತೆರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ದೇವಾಲಯದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶ ನೀಡಿದ ಮೋದಿ, ಮಹಾಂತ ಸ್ವಾಮಿ, ಬಿಎಪಿಎಸ್ ಸಂಸ್ಥೆ ಹಾಗೂ ಭಕ್ತರಿಗೆ ಅಭಿನಂದನೆ ಸಲ್ಲಿಸಿದರು. ದೇವಾಲಯವು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಹಾಗೂ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.

ಪ್ರಮುಖ ಸ್ವಾಮಿ ಮಹಾರಾಜರಿಗೆ ಗೌರವ ಸಲ್ಲಿಸಿದ ಮೋದಿ, ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿನಾದ್ಯಂತ ಪಸರಿಸಲು ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. 2024ರಲ್ಲಿ ಅಬುಧಾಬಿಯಲ್ಲಿ ಉದ್ಘಾಟನೆಯಾದ ಬಿಎಪಿಎಸ್ ದೇವಾಲಯವನ್ನು ಉಲ್ಲೇಖಿಸಿದ ಅವರು, ಪ್ಯಾರಿಸ್ ದೇವಾಲಯವು ಭಾರತೀಯ ಸಂಸ್ಕೃತಿಯ ಜಾಗತಿಕ ಪಯಣದ ಮುಂದುವರಿಕೆಯಾಗಿದೆ ಎಂದರು.
ಸ್ವಾಮಿನಾರಾಯಣ ದೇವಾಲಯಗಳು ಭಾರತದ ಪ್ರಾಚೀನ ಮೌಲ್ಯಗಳನ್ನು ವಿಶ್ವದ ವಿವಿಧ ಭಾಗಗಳಿಗೆ ತಲುಪಿಸುವುದರ ಜೊತೆಗೆ ಭಕ್ತಿ ಮತ್ತು ಸಾಮಾಜಿಕ ಸೇವೆಯ ಕೇಂದ್ರಗಳಾಗುತ್ತಿವೆ ಎಂದು ಹೇಳಿದರು.
ದೇವಾಲಯದ ನಿರ್ಮಾಣವನ್ನು ಶ್ಲಾಘಿಸಿದ ಮೋದಿ, ಇದನ್ನು ‘ಮೇಡ್ ಇನ್ ಇಂಡಿಯಾ, ಬಿಲ್ಟ್ ಇನ್ ಫ್ರಾನ್ಸ್’ ಎಂದು ಬಣ್ಣಿಸಿದರು. ದೇವಾಲಯದ ಹಲವು ಕಲ್ಲುಗಳನ್ನು ಭಾರತದಲ್ಲಿ ಕೆತ್ತಲಾಗಿದ್ದು, ಭಾರತೀಯ ಸಾಂಪ್ರದಾಯಿಕ ಕರಕುಶಲತೆ ಹಾಗೂ ಫ್ರೆಂಚ್ ಎಂಜಿನಿಯರಿಂಗ್‌ನ ಸುಂದರ ಸಂಯೋಜನೆಯಾಗಿದೆ ಎಂದರು.

ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ರಕ್ಷಣೆ, ಬಾಹ್ಯಾಕಾಶ ಮತ್ತು ಹವಾಮಾನ ಕ್ಷೇತ್ರಗಳಲ್ಲಿ ಭಾರತ-ಫ್ರಾನ್ಸ್ ಸಹಕಾರ ವಿಸ್ತರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. 2026ನ್ನು ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷವಾಗಿ ಆಚರಿಸಲಾಗುತ್ತಿದೆ ಎಂದರು.
ಭಾರತ-ಫ್ರಾನ್ಸ್ ನಡುವಿನ ಐತಿಹಾಸಿಕ ಸಾಂಸ್ಕೃತಿಕ ಬಾಂಧವ್ಯವನ್ನು ನೆನಪಿಸಿದ ಮೋದಿ, ಯೋಗವು ಎರಡೂ ದೇಶಗಳ ಜನರ ನಡುವಿನ ಬಲವಾದ ಸೇತುವೆಯಾಗಿದೆ ಎಂದರು.
ಪ್ಯಾರಿಸ್ ದೇವಾಲಯವು ಯುರೋಪ್‌ನಾದ್ಯಂತ ಸಂಸ್ಕೃತಿ ಮತ್ತು ಸೇವೆಯ ಪ್ರಮುಖ ಕೇಂದ್ರವಾಗಲಿ ಎಂದು ಹಾರೈಸಿದ ಮೋದಿ, ಮುಂದಿನ ದಿನಗಳಲ್ಲಿ ವೈಯಕ್ತಿಕವಾಗಿ ದೇವಾಲಯಕ್ಕೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದರು.







































































