ಹಾಸನ: ಬಯಲುಸೀಮೆ ಜಿಲ್ಲೆಗಳ ದಶಕಗಳ ಕನಸಾಗಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ನೀರು ಹರಿಸುವ ಗುರಿಯೊಂದಿಗೆ ಜಲಸಂಪನ್ಮೂಲ ಸಚಿವರು ಗುರುವಾರ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಟ್ಟು 24.01 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಹಾಗೂ ಮುಂದಿನ ಒಂದೂವರೆ ವರ್ಷದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಗುರಿಯನ್ನು ಅಧಿಕಾರಿಗಳಿಗೆ ಸಚಿವರು ನೆನಪಿಸಿದರು.
ಅರಸೀಕೆರೆ ತಾಲೂಕಿನ ತೊಳಲುತೊರೆ ಪ್ಯಾಕೇಜ್-8ರ ಗುರುತ್ವ ಕಾಲುವೆ ಕಾಮಗಾರಿ ಪರಿಶೀಲಿಸಿದ ಸಚಿವರು, ಮೈನಿಂಗ್ ಮತ್ತು ಲೈನಿಂಗ್ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಕಾಲಹರಣ ಸಹಿಸುವುದಿಲ್ಲ ಎಂದು ಎಚ್ಚರಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಟ್ರಯಲ್ ರನ್‌ಗೆ ಸಿದ್ಧತೆ ಮಾಡುವಂತೆ ಸೂಚಿಸಿದರು.
ರಂಗನಾಥ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸಚಿವರು, ಹೇಮಾವತಿ ಲಿಂಕ್ ಮೂಲಕ ಅರಸೀಕೆರೆ ಕೆರೆಗಳನ್ನು ತುಂಬಿಸುವ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ಶೀಘ್ರ ದೊರಕಿಸುವ ಭರವಸೆ ನೀಡಿದರು.

ನಾಯ್ಕನಕೆರೆ ಕಾವಲ್‌ನ ಪ್ಯಾಕೇಜ್-6ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯ ಭೂಸ್ವಾಧೀನ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ರೈತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಹೊಸ ಜಿಒ ಹೊರಡಿಸಲಾಗಿದ್ದು, ಎರಡು–ಮೂರು ದಿನಗಳಲ್ಲಿ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.
ಬೇಲೂರಿನ ಐದಳ್ಳಕಾವಲ್ ವ್ಯಾಪ್ತಿಯ ಪ್ಯಾಕೇಜ್ 4, 5 ಮತ್ತು 6ರ ಕಾಮಗಾರಿಗಳನ್ನೂ ಪರಿಶೀಲಿಸಿದ ಅವರು, ನವೆಂಬರ್ ಒಳಗೆ ಲೆವೆಲ್ ರೀಚ್ ಹಾಗೂ ಕಟ್ ಆ್ಯಂಡ್ ಕವರ್ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ವಿಧಿಸಿದರು.
ಅರಣ್ಯ ಇಲಾಖೆಯ ತಕರಾರಿನಿಂದ ಮೂರು ವರ್ಷಗಳಿಂದ ಬಾಕಿಯಾಗಿದ್ದ 103 ರೈತರ ಜಮೀನು ಸಮಸ್ಯೆಯ ಕುರಿತು ಸಭೆ ನಡೆಸಿ ಪರಿಹಾರದ ಕ್ರಮಕ್ಕೆ ಸೂಚಿಸಿದರು. ಅರ್ಹ ರೈತರಿಗೆ ಎಕರೆಗೆ ₹16 ಲಕ್ಷ ಪರಿಹಾರದ ಜತೆಗೆ ₹2.50 ಲಕ್ಷ ದಯಾತ್ಮಕ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದಿನದ ಅಂತ್ಯದಲ್ಲಿ ಸಕಲೇಶಪುರದ ದೊಡ್ಡನಾಗರದ ಹಂತ-10ರ ವಿತರಣಾ ತೊಟ್ಟಿ ಹಾಗೂ ದೋಣಿಗಲ್ ಪಂಪಿಂಗ್ ಸ್ಟೇಷನ್‌ಗೆ ಭೇಟಿ ನೀಡಿದ ಸಚಿವರು, ಪ್ರಸ್ತುತ ಪಂಪ್ ಮೂಲಕ 17 ಕೆರೆಗಳಿಗೆ ನೀರು ಹರಿಸುತ್ತಿರುವ ಪ್ರಗತಿ ಪರಿಶೀಲಿಸಿದರು.
ಮಾರ್ಚ್‌ನಿಂದ ಎತ್ತಲಾಗಿರುವ 1.5 ಟಿಎಂಸಿ ನೀರಿನ ಹರಿವು ಹಾಗೂ ಗುರುತ್ವ ಕಾಲುವೆಯ ಸಾಮರ್ಥ್ಯದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಬೂಬುಗಳಿಗೆ ಅವಕಾಶವಿಲ್ಲ, ಫಲಿತಾಂಶವೇ ಮುಖ್ಯ ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಸಚಿವ ಶಿವಲಿಂಗೇಗೌಡ, ಶಾಸಕ ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






































































