ಬೆಂಗಳೂರು: ಪಿ.ಸಿ. ಹೋಟಾ ಸಮಿತಿ ವರದಿ ಹಾಗೂ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ನಿಯಮಾವಳಿ ಮತ್ತು ಪ್ರಕ್ರಿಯೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ಅಳವಡಿಸುವ ಮೂಲಕ ಆಯೋಗಕ್ಕೆ ಸೂಕ್ತ ಕಾಯಕಲ್ಪ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮುಖ್ಯಮಂತ್ರಿಯನ್ನು ಭೇಟಿಯಾದ ನಿಯೋಗ, ಇತ್ತೀಚಿನ ದಿನಗಳಲ್ಲಿ ಕೆಪಿಎಸ್‌ಸಿಯಲ್ಲಿ ನಡೆದಿರುವ ಅಕ್ರಮಗಳ ಆರೋಪಗಳಿಂದ ಉದ್ಯೋಗಾಕಾಂಕ್ಷಿಗಳು ಹಾಗೂ ಸಾರ್ವಜನಿಕರಲ್ಲಿ ಆಯೋಗದ ಮೇಲಿನ ನಂಬಿಕೆ ಕುಸಿದಿದೆ. ಇದರಿಂದ ಸರ್ಕಾರದ ಆಡಳಿತದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧದ ಆರೋಪಗಳ ಕುರಿತು ಸಂವಿಧಾನದ ಅನುಚ್ಛೇದ 317ರಡಿ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ತನಿಖೆ ನಡೆಯುವ ಅವಧಿಯಲ್ಲಿ ಆರೋಪಿತ ಅಧ್ಯಕ್ಷರು ಮತ್ತು ಸದಸ್ಯರನ್ನು ಅಮಾನತುಗೊಳಿಸುವುದು ಹಾಗೂ ತಪ್ಪಿತಸ್ಥ ಪರೀಕ್ಷಾ ನಿಯಂತ್ರಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿದೆ.

ಇತ್ತೀಚೆಗೆ ನಡೆದ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮ ನಡೆದಿದ್ದರೆ ಅವುಗಳನ್ನು ರದ್ದುಗೊಳಿಸಿ, ಭ್ರಷ್ಟಾಚಾರದ ತನಿಖೆಯನ್ನು ಇಡೀ ಆಯೋಗಕ್ಕೆ ವಿಸ್ತರಿಸಬೇಕು. ತಪ್ಪಿತಸ್ಥರು ಅಕ್ರಮವಾಗಿ ಗಳಿಸಿರುವ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಪಾರದರ್ಶಕ ನೇಮಕಾತಿಗೆ ಸಲಹೆಗಳು
ಆಯೋಗದ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ನಿಷ್ಠಾವಂತ, ಪ್ರಾಮಾಣಿಕ ಹಾಗೂ ದಕ್ಷರನ್ನು ಒಳಗೊಂಡ ಸಣ್ಣ ಸಮಿತಿಯನ್ನು ರಚಿಸಬೇಕು. ಅಲ್ಲಿಯವರೆಗೆ ಸರ್ಕಾರ ಯಾವುದೇ ಹೊಸ ನೇಮಕಾತಿ ಪ್ರಸ್ತಾವನೆಯನ್ನು ಆಯೋಗಕ್ಕೆ ಕಳುಹಿಸಬಾರದು ಎಂದು ಮನವಿ ಮಾಡಲಾಗಿದೆ.
ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಪಾರದರ್ಶಕವಾಗಲು ಶೋಧನಾ ಸಮಿತಿ ರಚಿಸಿ, ಅದರ ಶಿಫಾರಸಿನ ಆಧಾರದ ಮೇಲೆ ನೇಮಕ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಹಾಗೂ ಕುಟುಂಬ ಸದಸ್ಯರ ಸ್ಥಿರ ಮತ್ತು ಚರಾಸ್ತಿಗಳ ವಿವರವನ್ನು ಪ್ರತಿವರ್ಷ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸುವಂತೆ ಕಾನೂನು ರೂಪಿಸಬೇಕು ಎಂದು ಸಲಹೆ ನೀಡಲಾಗಿದೆ.
ಆಯೋಗ ನಡೆಸುವ ಸಂದರ್ಶನಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಿ, ಅದರ ಮಾಹಿತಿಯನ್ನು ಕನಿಷ್ಠ ಮೂರು ವರ್ಷ ಸಂಗ್ರಹಿಸಿಡುವ ವ್ಯವಸ್ಥೆ ಜಾರಿಗೆ ತರಬೇಕು. ಈ ಕ್ರಮಗಳ ಮೂಲಕ ಉದ್ಯೋಗಾಕಾಂಕ್ಷಿಗಳು ಮತ್ತು ಸಾರ್ವಜನಿಕರಲ್ಲಿ ಕೆಪಿಎಸ್‌ಸಿ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
ನಿಯೋಗದಲ್ಲಿ ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ, ಬಿ.ಎಲ್. ಶಂಕರ್, ಎಲ್. ಹನುಮಂತಯ್ಯ, ಚಂದ್ರಪ್ಪ, ಮುದ್ದಹನುಮೇಗೌಡ, ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯ, ಎಚ್.ಎಂ. ರೇವಣ್ಣ, ರಾಣಿ ಸತೀಶ್, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಶಾಸಕರಾದ ಪಿ.ಆರ್. ರಮೇಶ್, ಕೊಂಡಜ್ಜಿ ಮೋಹನ್, ಹಿರಿಯ ಸಾಹಿತಿ ಸಿ.ಎಸ್. ದ್ವಾರಕನಾಥ್ ಸೇರಿದಂತೆ ಹಲವರು ಇದ್ದರು.






































































