ಬೆಂಗಳೂರು: ಮಂಚನಬೆಲೆ ಜಲಾಶಯದ ಸುತ್ತಮುತ್ತ ಸರ್ಕಾರಕ್ಕೆ ಸೇರಿರುವ 200 ಎಕರೆಗೂ ಹೆಚ್ಚಿನ ಸ್ಥಳವಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಜಂಗಲ್ ಲಾಡ್ಜ್ ರೆಸಾರ್ಟ್ ಪ್ರಾರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ತಿಳಿಸಿದ್ದಾರೆ.
ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ಕುರಿತು ಮಾಹಿತಿ ಹಂಚಿಕೊಂಡರು.
ರಾಮನಗರ ಜಿಲ್ಲೆಗೆ ನಿಸರ್ಗದ ಕೊಡುಗೆಯಿದ್ದು, ಪ್ರವಾಸಿ ತಾಣಗಳಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ರಾಮನಗರ ಜಿಲ್ಲೆಗೆ ಪ್ರವಾಸಿ ಸರ್ಕೊಟ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದವರು ಹೇಳಿದರು.
ಮೂಲಭೂತ ಸೌಕರ್ಯಗಳಾದ ವಾಹನ ನಿಲುಗಡೆ, ಶೌಚಾಲಯ, ತಂಗಲು ಕೊಠಡಿಗಳನ್ನು ಮೊದಲು ಯೋಜನೆ ರೂಪಿಸಲಾಗುವುದು. ಇದಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆ ಇಲ್ಲ. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
ಎಕೋ ಟೂರಿಸಂ :
ಜಿಲ್ಲೆಯಲ್ಲಿ ಅರಣ್ಯ ಪ್ರದೇಶಕ್ಕೆ ದಕ್ಕೆ ಉಂಟುಮಾಡದೇ ಸಾವನದುರ್ಗದಲ್ಲಿ ಮೌಂಟ್ ಕ್ಲಂಬಿಂಗ್, ರೋಪ್ ವೇ ಮಾಡಲು ಚಿಂತಿಸಲಾಗುತ್ತಿದೆ. ಸಾವನದುರ್ಗದಲ್ಲಿ ಬರುವ ಪ್ರವಾಸಿಗರಿಗೆ ಸುರಕ್ಷತೆ ನೀಡುವ ಬಗ್ಗೆ ಬರುವ ಪ್ರವಾಸಿಗರನ್ನು ಮೌಂಟ್ ಕ್ಲಂಬಿಂಗ್ ಮಾಡಲು ಮಾರ್ಗದರ್ಶಕರನ್ನು ನೀಡುವುದು ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.
ಮಂಚನಬಲೆ ನೀರನ್ನು ಕುಡಿಯುವ ನೀರಿಗೆ ಬಳಸಲಾಗುವುದು ಆದರಿಂದ ವಾಟರ್ ಸ್ಪೋರ್ಟ್ಸ್ ಮಾಡಲು ಪರಿಶೀಲಿಸಬೇಕಿದೆ. ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಬೆಟ್ಟಕ್ಕೆ ರೋಪ್ ವೇ ಮಾಡುವಂತೆ ಸ್ಥಳೀಯರು ಮಾನವಿ ನೀಡಿದ್ದಾರೆ. ಈ ಬಗ್ಗೆ ಸಹ ಚಿಂತಿಸಲಾಗುವುದು ಎಂದರು.
ಕಣ್ವ ಜಲಾಶಯದಲ್ಲಿ ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿದೆ. ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಹತ್ತಿರವಿರುವ ಹಿನ್ನಲೆಯಲ್ಲಿ ವಾಟರ್ ಸ್ಪೋರ್ಟ್ಸ್ ಪ್ರಾರಂಭಿಸಿದರೆ ಹೆಚ್ಚಿನ ಜನರು ಬರಲಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರೆ ಎರಡು ಮೂರು ದಿನ ತಂಗಿ ಪ್ರವಾಸಿ ಸ್ಥಳ ವೀಕ್ಷಿಸುವ ರೀತಿ ಮಾಡಲಾಗುವುದು ಎಂದರು.
ಶಾಲಾ ಮಕ್ಕಳ ಪ್ರವಾಸ: ಶಾಲೆಯಲ್ಲಿಮಕ್ಕಳು ಐತಿಹಾಸಿಕ ಸ್ಥಳಗಳ ಬಗ್ಗೆ ಪುಸ್ತಕದಲ್ಲಿ ಮಾತ್ರ ಓದುತ್ತಾರೆ ಅವುಗಳನ್ನು ಜೀವನ ಪರ್ಯಂತ ನೋಡುವುದೇ ಇಲ್ಲ. ಮಕ್ಕಳು ಪ್ರವಾಸ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಪ್ರೋತ್ಸಹಿಸಲಾಗುವುದು. ಮುಖ್ಯ ಪ್ರವಾಸಿ ಸ್ಥಳಗಲ್ಲಿ ಹೆಚ್ಚಿನ ಮಕ್ಕಳು ತಂಗಲು ತಂಗುದಾಣ ನಿರ್ಮಿಸಲಾಗುವುದು. ಮಕ್ಕಳು ವಾಸ್ತವ್ಯ ಮಾಡಿ ಎರಡು ಮೂರು ದಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು ಎಂದರು.
ಕೆಂಪಾಪುರ, ಸಾವನದುರ್ಗ, ಮಂಚನಬೆಲೆ ಜಲಾಶಯ ಪರಿಶೀಲನೆ ವೇಳೆ ಮಾಗಡಿ ಶಾಸಕ ಮಂಜುನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್, ಜಂಗಲ್ ಲಾಡ್ಜ್ ಮತ್ತು ರೆಸಾಟ್೯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.