ಬೆಂಗಳೂರು: ಲಂಡನ್‌ನಲ್ಲಿ ನಡೆದ 34ನೇ ರೇನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ಪ್ರಶಸ್ತಿ ಗೆದ್ದ ಅನೂಯಾ ಸ್ವಾಮಿ ಹಾಗೂ ಪಂಕಜಾ ಚಿತ್ರದ ತಂಡಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ, “ಕರ್ನಾಟಕವು ಜಾಗತಿಕ ವೇದಿಕೆಯಲ್ಲಿ ಮತ್ತೊಂದು ಹೆಮ್ಮೆಯ ಕ್ಷಣವನ್ನು ಆಚರಿಸುತ್ತಿದೆ” ಎಂದು ಹೇಳಿದ್ದಾರೆ.
34ನೇ ರೇನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅನೂಯಾ ಸ್ವಾಮಿ ಮತ್ತು ಪಂಕಜಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಈ ಸಾಧನೆಯೊಂದಿಗೆ ಅನೂಯಾ ಸ್ವಾಮಿ, ಈ ವಿಭಾಗದಲ್ಲಿ ರೇನ್‌ಡಾನ್ಸ್ ಚಲನಚಿತ್ರೋತ್ಸವದ ಅತ್ಯುನ್ನತ ಗೌರವ ಪಡೆದ ಮೊದಲ ಭಾರತೀಯ ಚಲನಚಿತ್ರ ನಿರ್ಮಾಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಪಂಕಜಾ ಚಿತ್ರ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಪರಿಗಣನೆಗೂ ಅರ್ಹತೆ ಪಡೆದಿದೆ.
“ನಿಮ್ಮ ಈ ಯಶಸ್ಸು ಕರ್ನಾಟಕದ ಕಥೆಗಾರರ ಸೃಜನಶೀಲತೆ, ಪ್ರತಿಭೆ ಮತ್ತು ಅಪಾರ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದೆ. ನೀವು ಮತ್ತು ಇಡೀ ತಂಡ ಇನ್ನಷ್ಟು ಸಾಧನೆಗಳ ಮೆಟ್ಟಿಲೇರಲಿ” ಎಂದು ಮುಖ್ಯಮಂತ್ರಿ ಶುಭ ಹಾರೈಸಿದ್ದಾರೆ.






































































