ಬೆಂಗಳೂರು: ಜಿಂದಾಲ್ ಭೂ ವಿವಾದ ಇದೀಗ ರಾಜ್ಯ ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿಯನ್ನು ತದ್ದಿಟ್ಟಂತಿದೆ. ಬಿಎಸ್‌ವೈ ಸರ್ಕಾರದ ನಡೆ ಬಗ್ಗೆ ಹೈಕೋರ್ಟ್ ಮತ್ತೆ ಹಿಗ್ಗಾಮುಗ್ಗಾ ಪ್ರಹಾರ ಮಾಡಿದೆ.
ಜಿಂದಾಲ್ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ‘ಮೊದಲೇ ಸರ್ಕಾರಿ ಆದೇಶ ಹೊರಡಿಸಿ ಬಳಿಕ ಸಂಪುಟದ ಮುಂದೆ ಮಂಡಿಸುವುದು ಸರಿಯೇ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಏನಿದು ಪ್ರಕರಣ..?
ಕೊರೋನಾ ಸಂಕಟ ಕಾಲದಲ್ಲಿ ಖಾಸಗಿ ಜಿಂದಾಲ್ ಕಂಪನಿಗೆ ತರಾತುರಿಯಲ್ಲಿ 3367 ಎಕರೆ ಜಮೀನು ಮಂಜೂರಾತಿ ನಿರ್ಧಾರವನ್ನು ಬಿಎಸ್‌ವೈ ಸರ್ಕಾರ ಕೈಗೊಂಡಿತ್ತು. ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆಗ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಜಿಂದಾಲ್‌ಗೆ ಜಮೀನು ಮಂಜೂರು ಮಾಡುವ ಪ್ರಕ್ರಿಯೆ ಆರಂಭವಾಗಿತ್ತು. ಆಗ ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ವತಿಯಿಂದ ಭಾರೀ ಪ್ರತಿಭಟನೆ ನಡೆದಿತ್ತು. ಆ ಸರ್ಕಾರ ಪತನಗೊಂಡು ಬಿಎಸ್‌ವೈ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಅವರ ಮುಂದಾಳುತ್ವದಲ್ಲಿ ಅದೇ ಜಿಂದಾಲ್ ಕಂಪನಿಗೆ ಸಂಡೂರು ಬಳಿ 3667 ಎಕರೆ ಜಮೀನು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನು ಪ್ರಶ್ನಿಸಿ ಕೆ.ಪಾಲ್ ಎಂಬವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಸಚಿವರು ಹಾಗೂ ಶಾಸಕರ ವಿರೋಧವಿದ್ದರೂ, ಕಡಿಮೆ ದರದಲ್ಲಿ ನಿಯಮ ಬಾಹಿರವಾಗಿ ಜಮೀನು ಮಂಜೂರು ಮಾಡಲಾಗಿದೆ ಎಂದು ಈ ದೂರಿನಲ್ಲಿ ಕೋರ್ಟ್ ಗಮನಸೆಳೆದಿರುವ ಅರ್ಜಿದಾರರು, ಇದು ಬಹುಕೋಟಿ ಹಗರಣವಾಗಿದ್ದು ಕಿಕ್‌ಬ್ಯಾಕ್ ಸಂದಾಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರ ಪರವಾಗಿ ಮಾಜಿ ಸರ್ಕಾರಿ ಅಭಿಯೋಜಕ ಎಸ್.ದೊರೆರಾಜು ವಾದಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ದಾಖಲೆಗಳನ್ನು ನೀಡಲು ಹಿಂದೇಟು ನೀಡುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ಈ ಕುರಿತಂತೆ ಮಂಗಳವಾರ ಮತ್ತೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದ್ದು ಸರ್ಕಾರದ ನಡೆ ಬಗ್ಗೆ ಪೀಠವು ತರಾಟೆಗೆ ತೆಗೆದುಕೊಂಡಿದೆ. ಸಂಪುಟದಲ್ಲಿನ ನಿರ್ಣಯ ಸಹಿತ ವಿವಿಧ ದಾಖಲೆಗಳ ಬಗ್ಗೆ ಗಮನಹರಿಸಿದ ನ್ಯಾಯಾಲಯ, ಜಿಂದಾಲ್‌ಗೆ ಜಮೀನು ಮಂಜೂರು ಮಾಡುವ ಕುರಿತು ಮೇ 6ರಂದು ಹೊರಡಿಸಿರುವ ಆದೇಶಕ್ಕೆ ಸಂಪುಟದ ಅನುಮೋದನೆ ಇದೆಯೇ ಎಂದು ಸ್ಪಷ್ಟಪಡಿಸುವಂತೆ ಸರ್ಕಾರದ ವಕೀಲರಿಗೆ ಸೂಚಿಸಿದೆ.
ಇದೇ ವೇಳೆ, ಜೂನ್ 15ರಂದು ಸರ್ಕಾರದ ವಕೀಲರು ಸಲ್ಲಿಸಿದ್ದ ಮೆಮೋದಲ್ಲಿ, ಸರ್ಕಾರದ ಆದೇಶವನ್ನು ಸಚಿವ ಸಂಪುಟದ ಮುಂದಿಟ್ಟು ತೀರ್ಮಾನಿಸಲಾಗುವುದು ಎಂದು ತಿಳಿಸಲಾಗಿತ್ತು. ಈ ಬಗ್ಗೆ ಗಮನಹರಿಸಿದ ನ್ಯಾಯಮೂರ್ತಿಗಳು, ಸಂಪುಟದ ತೀರ್ಮಾನ ಆಧರಿಸಿ ಸರ್ಕಾರ ಆದೇಶ ಹೊರಡಿಸಬೇಕೇ ಹೊರತು, ಮೊದಲೇ ಆದೇಶ ಹೊರಡಿಸಿ ಬಳಿಕ ಸಂಪುಟದ ಮುಂದೆ ಇಡಲಾಗುವುದು ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಜಿಂದಾಲ್‌ಗೆ ಜಮೀನು ನೀಡುವ ವಿಷಯದಲ್ಲಿ ನಿಲುವನ್ನು ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿದೆ.