ಚಿಕ್ಕಬಳ್ಳಾಪುರ: ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡು ಕುಯುಕ್ತಿ ಬುದ್ಧಿ ತೋರಿಸಿದೆ. ಇದರಿಂದ ಎರಡೂ ರಾಜ್ಯಗಳ ಸ್ನೇಹ ಸಂಬಂಧಕ್ಕೆ ಧಕ್ಕೆಯಾಗುತ್ತದೆ.
ಹಾಗಾಗಿ ಮೆಕೆದಾಟು ವಿಚಾರದಲ್ಲಿ ಕ್ಯಾಬಿನೆಟ್‌ನಲ್ಲಿ ತಮ್ಮ ನಿರ್ಧಾರವನ್ನು ವಾಪಸ್ ಪಡೆಯಿರಿ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್ ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಕಾವೇರಿ ನೀರು ನೀಡುವುದಕ್ಕೆ ತಕರಾರಿಲ್ಲ. ಪ್ರತಿ ವರ್ಷ ರಾಜ್ಯದಿಂದ ಕಾವೇರಿ ನೀರು ಕೊಡುತ್ತಿದ್ದೇವೆ. ಅಲ್ಲದೆ ನಾವು ಹೆಚ್ಚಾಗಿಯೇ ನೀರು ನೀಡುತ್ತಿದ್ದೇವೆ. ಅದಾಗಿಯೂ ಮೇಕೆದಾಟು ಯೋಜನೆಯಿಂದ ಅವರಿಗೆ ನೀರಿನ ಪಾಲು ಕಡಿಮೆಯಾಗುವುದಿಲ್ಲ ಎಂದರು. ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಮೊದಲಾದ ಜಿಲ್ಲೆಗಳಿಗೆ ನೀರು ಪೂರೈಸಲು ಅಣೆಕಟ್ಟು ಕಟ್ಟಿದರೆ ತೊಂದರೆಯಾಗುವುದಿಲ್ಲ. ಈ ವಿಚಾರದಲ್ಲಿ ತಮಿಳುನಾಡಿನ ನಡೆಗೆ ಖೇದ ವ್ಯಕ್ತಪಡಿಸುತ್ತೇನೆ ಎಂದರು.
ತಮಿಳುನಾಡಿನ ನಡೆಯಿಂದಾಗಿ ಎರಡೂ ರಾಜ್ಯಗಳ ಸ್ನೇಹ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಸಿಎಂ ಸ್ಟಾಲಿನ್ ರವರು ಕ್ಯಾಬಿನೆಟ್ ನಿರ್ಧಾರ ವಾಪಸ್ ಪಡೆದು ಅನ್ಯೋನ್ಯವಾಗಿ ಸಹೋದರರಂತೆ ವರ್ತಿಸಬೇಕು. ಎರಡೂ ರಾಜ್ಯಗಳು ಒಂದೇ ದೇಶದಲ್ಲಿವೆ. ಆ ಮನೋಭಾವದಿಂದ ಅವರು ನಡೆದುಕೊಳ್ಳಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಎರಡನೇ ಅಲೆ ಇಳಿಮುಖವಾಗಿರುವ ಹಿನ್ನೆಲಯಲ್ಲಿ ಅನ್ ಲಾಕ್ ಮಾಡಲಾಗಿದೆ ಎಂದರೆ ಕೊರೊನಾ ಸಂಪೂರ್ಣ ನಿವಾರಣೆಯಾಗಿದೆ ಎಂದರ್ಥವಲ್ಲ. ಆರ್ಥಿಕ ಚಟುವಟಿಕೆಗಳಿಗೆ, ಜನಜೀವನಕ್ಕೆ ನೆರವಾಗಲಿದೆ ಎಂದು ಮಾತ್ರ ಅನ್ ಲಾಕ್ ಮಾಡಲಾಗಿದೆ. ಕೋವಿಡ್ ಸುರಕ್ಷತಾ ಕ್ರಮ ಪಾಲಿಸಬೇಕಿದೆ ಎಂದರು.
ಧಾರ್ಮಿಕ ಸ್ಥಳಗಳಲ್ಲಿ ಪೂಜೆಗೆ ಮಾತ್ರ ಅವಕಾಶ. ಜಾತ್ರೆ, ದೊಡ್ಡ ಸಭೆ ಮಾಡುವಂತಿಲ್ಲ ಎಂದ ಅವರು, ಮದುವೆಯಲ್ಲಿ 100 ಜನರು ಮಾತ್ರ ಪಾಲ್ಗೊಳ್ಳಬೇಕು. ಹೆಚ್ಚು ಜನರು ಸೇರುವುದು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಕಠಿಣ ಕ್ರಮಗಳ ಜಾರಿ ಜನರ ನಡವಳಿಕೆ ಮೇಲೆ ಆಧಾರಿತವಾಗಿದೆ ಎಂದರು