ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಅವರ ಅಭಿನಯಕ್ಕೆ ನಟಿ ರಶ್ಮಿಕಾ ಮಂದಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಗಿನ ಮೂಲದ ತಪಸ್ವಿನಿ ಅವರ ಸಾಧನೆಯನ್ನು ಕೊಂಡಾಡಿರುವ ರಶ್ಮಿಕಾ, ಅವರ ಮುಂದಿನ ಸಿನಿ ಪಯಣಕ್ಕೆ ಹೃದಯಪೂರ್ವಕ ಶುಭ ಹಾರೈಸಿದ್ದಾರೆ.
ಕನ್ನಡದಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ‘ಪ್ರೇಮದ ಊರಲಿ’ ಚಿತ್ರವು ಇದೀಗ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗಿದೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ತಪಸ್ವಿನಿ ಅವರ ಅಭಿನಯಕ್ಕೆ ರಶ್ಮಿಕಾ ಮೆಚ್ಚುಗೆ ವ್ಯಕ್ತಪಡಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, “ಕೂರ್ಗ್‌ನಿಂದ ಬಂದು ಸಿನಿಮಾ ಮಾಡಿ, ಚಿತ್ರಮಂದಿರಗಳಲ್ಲಿ ನಿಮ್ಮ ಸಿನಿಮಾ ಇಷ್ಟು ಚೆನ್ನಾಗಿ ಪ್ರದರ್ಶನ ಕಾಣುತ್ತಿರುವುದನ್ನು ಕಂಡು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ನನ್ನ ಸುಂದರ ಹುಡುಗಿಗೆ ಅಪಾರ ಪ್ರೀತಿ ಹಾಗೂ ಅಪ್ಪುಗೆಗಳು. ಇದು ಕೇವಲ ಆರಂಭ. ನಿನ್ನ ಎಲ್ಲಾ ಕನಸುಗಳು ನನಸಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ತಮ್ಮದೇ ಊರಿನ ಪ್ರತಿಭೆಯೊಬ್ಬರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೆ ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದು, ತಪಸ್ವಿನಿ ಅವರ ಭವಿಷ್ಯದ ಸಾಧನೆಗಳಿಗೂ ಶುಭ ಹಾರೈಸಿದ್ದಾರೆ.
ಇನ್ನು, ರಶ್ಮಿಕಾ ಅವರ ಈ ಪ್ರೀತಿಯ ಸಂದೇಶಕ್ಕೆ ತಪಸ್ವಿನಿ ಪೂಣಚ್ಚ ಕೂಡ ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಅವರ ಪೋಸ್ಟ್ ಅನ್ನು ಮರುಹಂಚಿಕೊಂಡಿರುವ ಅವರು, “ನನ್ನ ದೇವತೆ ನೀವು ರಶ್ಮಿಕಾ. ನಿಮ್ಮಿಂದ ಈ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು. ನನ್ನ ದಿನ ಸಾರ್ಥಕವಾಯಿತು” ಎಂದು ಬರೆದುಕೊಂಡಿದ್ದಾರೆ.
‘ಪ್ರೇಮದ ಊರಲಿ’ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವ ತಪಸ್ವಿನಿಗೆ ರಶ್ಮಿಕಾ ಅವರ ಮೆಚ್ಚುಗೆಯ ಮಾತುಗಳು ಮತ್ತಷ್ಟು ಉತ್ಸಾಹ ತುಂಬಿವೆ. ಕನ್ನಡದ ಯಶಸ್ಸಿನ ಬಳಿಕ ತೆಲುಗು ಪ್ರೇಕ್ಷಕರ ಮುಂದೆಯೂ ತೆರೆಕಂಡಿರುವ ಈ ಚಿತ್ರ, ತಪಸ್ವಿನಿ ಅವರ ಸಿನಿ ಪಯಣಕ್ಕೆ ಹೊಸ ತಿರುವು ನೀಡುವ ನಿರೀಕ್ಷೆಯಿದೆ.
















































































