ನವದೆಹಲಿ: ಪ್ರಧಾನ ಮಂತ್ರಿಗಳ ಸ್ಮರಣಿಕೆಗಳ (PM Mementos) ಇ-ಹರಾಜಿನ ಎಂಟನೇ ಆವೃತ್ತಿಯಲ್ಲಿ ಕರ್ನಾಟಕದ 30 ಸ್ಮರಣಿಕೆಗಳು ಸ್ಥಾನ ಪಡೆದಿದ್ದು, ರಾಜ್ಯದ ವೈವಿಧ್ಯಮಯ ಸಂಪ್ರದಾಯ, ಕರಕುಶಲ ಕಲೆ, ಸಾಂಸ್ಕೃತಿಕ ಪರಂಪರೆ ಹಾಗೂ ಸಮಕಾಲೀನ ಸಾಧನೆಗಳನ್ನು ಪರಿಚಯಿಸುತ್ತಿವೆ.
ಕರ್ನಾಟಕದ ಸಂಗ್ರಹದಲ್ಲಿ ಜ್ಞಾನ ಮತ್ತು ಭಕ್ತಿಯ ಸಂಕೇತವಾಗಿರುವ ಶೃಂಗೇರಿಯ ಶಾರದಾಂಬೆ ದೇವಿಯ ಸ್ಮರಣಿಕೆ, ಸಂತ ಸೇವಾಲಾಲ್ ಅವರಿಗೆ ಸಂಬಂಧಿಸಿದ ಕಲಾಕೃತಿಗಳು ಪ್ರಮುಖವಾಗಿವೆ. ಇವು ಬಂಜಾರ ಸಮುದಾಯದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.
ಕಿನ್ನಾಳ ಕಲೆ, ಬೀದ್ರಿ ಕಲೆ, ಕಂಬಳ ಉತ್ಸವದ ಛಾಯಾಚಿತ್ರ, ಮೈಸೂರು ಪೇಟಾ ಸೇರಿದಂತೆ ವಿವಿಧ ಸಾಂಪ್ರದಾಯಿಕ ಪೇಟಗಳು ಕರ್ನಾಟಕದ ಶ್ರೀಮಂತ ಕರಕುಶಲ ಹಾಗೂ ಗ್ರಾಮೀಣ ಸಂಸ್ಕೃತಿಯ ಪರಿಚಯ ನೀಡುತ್ತವೆ. ಪೇಟಗಳು ರಾಜ್ಯದ ಆಚರಣೆಗಳಲ್ಲಿ ಗೌರವ, ಗುರುತು ಮತ್ತು ಸಂಭ್ರಮದ ಸಂಕೇತವಾಗಿವೆ.

ಸಂಗ್ರಹದಲ್ಲಿ ಆಧುನಿಕ ಕರ್ನಾಟಕದ ಸಾಧನೆಗಳಿಗೂ ಸ್ಥಾನ ನೀಡಲಾಗಿದೆ. ಪ್ಯಾರಾಲಿಂಪಿಕ್ ಪದಕ ವಿಜೇತ ಸುಹಾಸ್ ಯತಿರಾಜ್ ಅವರ ಸಹಿ ಇರುವ ಬ್ಯಾಡ್ಮಿಂಟನ್ ರಾಕೆಟ್, ಸಮಕಾಲೀನ ಕಲಾಕೃತಿಗಳು ಹಾಗೂ ಶ್ರೀ ಮಧುಸೂದನ್ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್‌ನ ಮಾದರಿ ಪ್ರತಿಕೃತಿ ಇದರಲ್ಲಿ ಸೇರಿವೆ.
ಪತ್ರಿಕಾ ಮಾಹಿತಿ ಬ್ಯೂರೋ ಪ್ರಕಾರ, ಕರ್ನಾಟಕದ 30 ಸ್ಮರಣಿಕೆಗಳು ರಾಜ್ಯದ ವಿಭಿನ್ನ ಸಾಂಸ್ಕೃತಿಕ ಅಭಿವ್ಯಕ್ತಿಗಳ ಜತೆಗೆ ಸಮಕಾಲೀನ ಸಾಧನೆಗಳನ್ನೂ ಬಿಂಬಿಸುತ್ತವೆ.
ಪ್ರಧಾನ ಮಂತ್ರಿಗಳ ಸ್ಮರಣಿಕೆಗಳ ಇ-ಹರಾಜಿನ ಎಂಟನೇ ಆವೃತ್ತಿ ಅ.31, 2026ರವರೆಗೆ ನಡೆಯಲಿದೆ. ಹರಾಜಿನಿಂದ ಬರುವ ಆದಾಯವನ್ನು ‘ನಮಾಮಿ ಗಂಗೆ’ ಯೋಜನೆಗೆ ಬಳಸಲಾಗುತ್ತದೆ. ಆಸಕ್ತರು ಅಧಿಕೃತ ‘ಪಿಎಂ ಮೆಮೆಂಟೋಸ್ ಇ-ಆಕ್ಷನ್’ ಪೋರ್ಟಲ್ ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು.
















































































