ಚನ್ನರಾಯಪಟ್ಟಣ: ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 21 ಕಿ.ಮೀ. ಮ್ಯಾರಥಾನ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಮೈಸೂರಿನ ಯುವರಾಜ ಕಾಲೇಜಿನ ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿ ಸಿ.ಎ. ಸೃಜನ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಚನ್ನರಾಯಪಟ್ಟಣದ ಸಿ.ಎನ್. ಅರುಣ್ ಕುಮಾರ್ ಮತ್ತು ಜ್ಯೋತಿಲಕ್ಷ್ಮಿ ದಂಪತಿಯ ಪುತ್ರ ಸೃಜನ್, ಮ್ಯಾರಥಾನ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟದ ಮೂರು ವಿಭಾಗಗಳಲ್ಲಿ ಜಯ ಸಾಧಿಸಿ, ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಸೃಜನ್ ಅವರ ಕ್ರೀಡಾ ಸಾಧನೆಗೆ ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
ವಿವಿಧ ಕ್ಷೇತ್ರಗಳ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಉದ್ಯಮಿಗಳು ಸೃಜನ್ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.
















































































