ಜಿಬೂಟಿ: ಜಿಬೂಟಿಯಿಂದ ಯೆಮೆನ್ಗೆ ತೆರಳುತ್ತಿದ್ದ ದೋಣಿಯೊಂದು ಕರಾವಳಿಯ ಸಮೀಪ ಮಗುಚಿಬಿದ್ದ ಪರಿಣಾಮ, 15 ಮಕ್ಕಳು ಸೇರಿದಂತೆ ಕನಿಷ್ಠ 109 ವಲಸಿಗರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ದುರಂತದಲ್ಲಿ 80ಕ್ಕೂ ಹೆಚ್ಚು ಮಂದಿ ಬದುಕುಳಿದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೃತರಲ್ಲಿ ಹೆಚ್ಚಿನವರು ಇಥಿಯೋಪಿಯಾ ಮತ್ತು ಸೊಮಾಲಿಯಾ ಮೂಲದವರು ಎನ್ನಲಾಗಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಅಪಾಯಕಾರಿ ಸಮುದ್ರ ಮಾರ್ಗದಲ್ಲಿ ದೋಣಿಯ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನೆಯ ಬಳಿಕ ಕರಾವಳಿ ರಕ್ಷಣಾ ಪಡೆ ಹಾಗೂ ವಿಶ್ವಸಂಸ್ಥೆಯ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಸಮುದ್ರದಲ್ಲಿದ್ದವರನ್ನು ರಕ್ಷಿಸಿವೆ. ಗಂಭೀರವಾಗಿ ಗಾಯಗೊಂಡವರನ್ನು ಜಿಬೂಟಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಂತ್ರಸ್ತರ ಗುರುತು ಮತ್ತು ದುರಂತದ ನಿಖರ ಕಾರಣದ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿಲ್ಲ.
















































































