ಬೆಂಗಳೂರು:ಪ್ರಧಾನಿ ಮೋದಿ ಪ್ರಕಾರ ಕಾಂಗ್ರೆಸ್ 85% ಸರ್ಕಾರ, ಕಾಂಗ್ರೆಸ್ ಹೇಳುತ್ತೆ ಬಿಜೆಪಿ 40% ಸರ್ಕಾರ ಎನ್ನುತ್ತಾರೆ. ಆದರೆ ಜನರ ತೆರಿಗೆ ಹಣವನ್ನು ಗುಣಾತ್ಮಕವಾಗಿ ಖರ್ಚು ಮಾಡುವ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಚಿಂತನೆ ಇಲ್ಲ ಎಂದು ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರದ ಡಾ.ರಾಜ್ ಕುಮಾರ್ ವೃತ್ತದಲ್ಲಿ ಜೆಡಿಎಸ್ ಪರ ಪ್ರಚಾರದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಚುನಾವಣೆ ಬಂದಾಗ ಮಾತ್ರ ಉತ್ತರ ಭಾರತದ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಕರ್ನಾಟಕ ನೆನಪು, ಮಮಕಾರ, ಪ್ರೀತಿ ಬರುತ್ತದೆ. ಅಕಾಲಿಕ ಮಳೆ ಬಂದಾಗ, ಬರಗಾಲ ಬಂದಾಗ, ಇನ್ನೇನೋ ಸಮಸ್ಯೆ ಆದಾಗ ನಮ್ಮ ರಾಜ್ಯ ನೆನಪು ಬರೋದಿಲ್ಲ, ಇತ್ತ ಸುಳಿಯುವುದಿಲ್ಲ ಎಂದು ಗುಡುಗಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕನ್ನಡ ನಾಡಿನ ಹಲವು ಸಮಸ್ಯೆಗಳನ್ನು ರಾಷ್ಟ್ರೀಯ ಪಕ್ಷಗಳಿಂದ ಬಗೆಹರಿಸಲು ಸಾಧ್ಯವಾಗಿಲ್ಲ. ವಿಷ ಕನ್ಯೆ ಎಂದು ಬಿಜೆಪಿ ಕಾಂಗ್ರೆಸ್‌ಗೆ ಹೇಳಿ, ವಿಷ ಸರ್ಪ ಎಂದು ಕಾಂಗ್ರೆಸ್ ಬಿಜೆಪಿಗೆ ಬಿರುದು ಕೊಟ್ಟುಕೊಂಡು ಆರೋಪ ಪ್ರತ್ಯಾರೋಪ ಮಾಡಿಕೊಂಡು ಕಾಲಕಳೆಯುತ್ತಿರುವ ರಾಷ್ಟ್ರೀಯ ಪಕ್ಷಗಳು ಎಂದು ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಪಂಚರತ್ನ ಯೋಜನೆ ಜಾರಿಗೆ ಆಗಬೇಕಾರೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಬೇಕು, ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿದರೆ ಪಂಚರತ್ನ ಯೋಜನೆ ಜಾರಿಗೆ ತರಲು ಅಸಾಧ್ಯ ಆದ್ದರಿಂದ ಈ ಬಾರಿ ಹೆಚ್ಚು ಬಹುಮತ ನೀಡಬೇಕು ಆಗ ಸ್ವತಂತ್ರ ಸರ್ಕಾರ ರಚನೆ ಮಾಡಿ ಕನ್ನಡ ನಾಡನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.