ಬೆಂಗಳೂರು: ಉದ್ಯಾನ ನಗರಿಯಲ್ಲಿ ರಹಸ್ಯವಾಗಿ ನೆಲೆಯೂರಿರುವ ಬಾಂಗ್ಲಾದೇಶಿ ಪ್ರಜೆಗಳ ವಿರುದ್ಧ ಬೆಂಗಳೂರಿನ ವೈಟ್‌ಫೀಲ್ಡ್ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ರೀನಾ ಸುವರ್ಣ ನೇತೃತ್ವದ ಪೊಲೀಸರು ಬೆಳ್ಳಂಬೆಳಿಗ್ಗೆ ಅಖಾಡಕ್ಕಿಳಿದಿದ್ದು, ನಿರಾಶ್ರಿತರ ಸೋಗಿನಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಿಸಿ ವಾಸವಾಗಿದ್ದ ಬಾಂಗ್ಲಾದೇಶ ಮೂಲದ ಹಲವಾರು ಕುಟುಂಬಗಳನ್ನು ಪತ್ತೆ ಮಾಡಿದ್ದಾರೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ ಎನ್ನಲಾದ ಅಕ್ರಮ ವಲಸಿಗರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಬೆಂಗಳೂರು ಪೊಲೀಸರು ಶನಿವಾರ ‘ಆಪರೇಷನ್ ಮುಕ್ತ’ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದು, ಹಲವಾರು ಪ್ರದೇಶಗಳಲ್ಲಿ ದಾಳಿ ಮತ್ತು ಪರಿಶೀಲನಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಈ ಅಭಿಯಾನ ವೈಟ್‌ಫೀಲ್ಡ್ ಸುತ್ತಮುತ್ತಲ ಪ್ರದೇಶಗಳ್ಲಲಿ ಬಿರುಸಿನಿಂದ ಸಾಗಿದೆ. ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ರೀನಾ ಸುವರ್ಣ ಅವರೇ ವಿವಿಧ ತಂಡಗಳ ನೇತೃತ್ವ ವಹಿಸಿ ಸ್ವತಃ ಕಾರ್ಯಾಚರಣೆಗಿಳಿದಿದ್ದಾರೆ.

ಬೆಂಗಳೂರಿನ ಪ್ರಮುಖ ತಂತ್ರಜ್ಞಾನ ಕಾರಿಡಾರ್‌ಗಳ ಭಾಗವಾಗಿರುವ ವೈಟ್‌ಫೀಲ್ಡ್, ಕಾಡುಗೋಡಿ, ಮಹದೇವಪುರ ಮತ್ತು ಇತರ ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ. ಹಲವಾರು ಬಹುರಾಷ್ಟ್ರೀಯ ಐಟಿ-ಬಿಟಿ ಕಂಪನಿಗಳು ಇವೆ. ಹಾಗಾಗಿ ವಿದೇಶಿ ಪ್ರಜೆಗಳು ನೌಕರಿ ನಿಮಿತ್ತ ಕೂಡಾ ಸಹಜವಾಗಿ ವೈಟ್‌ಫೀಲ್ಡ್ ವಾಸವಿದ್ದಾರೆ. ಇಂತಹಾ ಪರಿಸ್ಥಿತಿಯನ್ನೇ ಅವಕಾಶವನ್ನಾಗಿಸಿ ಬಾಂಗ್ಲಾದೇಶ ಮೂಲದ ಹಲವರು ಅಕ್ರಮವಾಗಿ ವಾಸವಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನಿರ್ದೇಶನದ ಮೇರೆಗೆ ‘ಆಪರೇಷನ್ ಮುಕ್ತ’ ವಿಶೇಷ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ 500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.
ವೈಟ್‌ಫೀಲ್ಡ್ ವಿಭಾಗದಲ್ಲಿ ಡಿಸಿಪಿ ಸೈದುಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ಹಲವೆಡೆ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸ್ ತಂಡಗಳು ಈಗಾಗಲೇ ಹಲವಾರು ಶಂಕಿತ ಅಕ್ರಮ ವಲಸಿಗರನ್ನು ಪತ್ತೆಹಚ್ಚಿವೆ ಮತ್ತು ಕೆಲವರನ್ನು ಸೂಕ್ತ ಕಾನೂನು ಪ್ರಕ್ರಿಯೆಯ ನಂತರ ಆಯಾ ದೇಶಗಳಿಗೆ ಗಡೀಪಾರು ಮಾಡಲಾಗಿದೆ ಎಂದು ಸೈದುಲು ಅಡಾವತ್ ತಿಳಿಸಿದ್ದಾರೆ.

ಈ ನಡುವೆ, ವೈಟ್‌ಫೀಲ್ಡ್ ಉಪ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಬೇರೆ ದೇಶದ ಗುರುತಿನ ಚೀಟಿಗಳು ಅಥವಾ ಅವರು ಅನುಮತಿಯಿಲ್ಲದೆ ನೆಲೆಸಿರುವ ವಿದೇಶಿ ಪ್ರಜೆಗಳು ಎಂದು ಗೊತ್ತಾದರ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಗಮನಕ್ಕೆ ತರಲಾಗುತ್ತದೆ ಎಂದು ಅದಾವತ್ ತಿಳಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳಿಂದ ಗಡೀಪಾರು ಆದೇಶಗಳನ್ನು ಪಡೆದ ನಂತರ, ಕಾನೂನು ಕ್ರಮ ಕೈಗೊಂಡು ಆಯಾ ದೇಶಗಳಿಗೆ ಹಿಂತಿರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿಯಮಬಾಹಿರವಾಗಿ ಆಸರೆ ಕಲ್ಪಿಸಿದವರಿಗೆ ಎಚ್ಚರಿಕೆ:
ವೈಟ್‌ಫೀಲ್ಡ್ ಸುತ್ತಮುತ್ತ ಸೂಕ್ತ ಅನುಮತಿಯಿಲ್ಲದೆ ವಾಸಿಸುತ್ತಿರುವ ಶಂಕಿತ ಜನರ ಗುರುತು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಶಂಕಿತ ಬಾಂಗ್ಲಾದೇಶಿ ಪ್ರಜೆಗಳ ಮತ್ತು ರೋಹಿಂಗ್ಯಾಗಳ ಮೇಲೆ ವಿಶೇಷವಾಗಿ ಗಮನ ಹರಿಸಿದ್ದಾರೆ.

ಹಲವೆಡೆ ಸ್ಥಳೀಯರು ವಲಸೆ ಕಾರ್ಮಿಕರಿಗೆ ಬಾಡಿಗೆಗೆ ನೀಡಲಾದ ತಾತ್ಕಾಲಿಕ ಶೆಡ್‌ಗಳು ಮತ್ತು ಇತರ ತಾತ್ಕಾಲಿಕ ವಸತಿಗಳನ್ನು ನಿರ್ಮಿಸಲು ಅವಕಾಶ ನೀಡಿರುವುದನ್ನು ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತೆ ರೀನಾ ಸುವರ್ಣ ನೇತೃತ್ವದ ತಂಡ ಪತ್ತೆ ಮಾಡಿದೆ. ಇತರ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಬೆಂಗಳೂರಿಗೆ ಬರುವ ನಿರ್ಮಾಣ ಕಾರ್ಮಿಕರಿಗೆ ಬಾಡಿಗೆಗೆ ನೀಡುತ್ತಿರುವುದು ಬೆಳಕಿಗೆ ಬಂದಿದ್ದು, ನಿಯಮ ಬಾಹಿರವಾಗಿ ವಿದೇಶಿ ಪ್ರಜೆಗಳಿಗೆ ಆಸರೆ ನೀಡಬಾರದೆಂದು ಎಸಿಪಿ ರೀನಾ ಸುವರ್ಣ ಎಚ್ಚರಿಕೆ ನೀಡಿದ್ದಾರೆ.







































































