ಬೆಂಗಳೂರು: ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ, ಉದ್ಯೋಗ ನೀಡುವ ದಯಾಧರ್ಮವೂ ಅಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತಂದು, ಅಧಿಕಾರದಲ್ಲಿ ಪಾಲು ನೀಡುವ ಸಾಂವಿಧಾನಿಕ ಸಾಧನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ರಾಷ್ಟ್ರೀಯ ಓಬಿಸಿ ಮಹಾಸಂಘದ 11ನೇ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಪ್ರತಿನಿಧಿಗಳನ್ನು ಸ್ವಾಗತಿಸಿದರು. ಮೀಸಲಾತಿ ಪರಂಪರೆಗೆ ಐತಿಹಾಸಿಕ ಹಿನ್ನೆಲೆಯಿರುವ ಕರ್ನಾಟಕದಲ್ಲಿ ಓಬಿಸಿ ರಾಷ್ಟ್ರೀಯ ಸಮಾವೇಶ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
12ನೇ ಶತಮಾನದಲ್ಲೇ ಬಸವಣ್ಣ ಅವರು ಕಾಯಕಕ್ಕೆ ಘನತೆ ನೀಡಿ, ಜಾತಿ-ಲಿಂಗ-ವೃತ್ತಿಯ ಭೇದಗಳನ್ನು ಮೀರಿ ಸಮಾನತೆಯ ಸಂದೇಶ ಸಾರಿದ್ದರು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ 1918ರಲ್ಲಿ ಮಿಲ್ಲರ್ ಆಯೋಗ ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಬುನಾದಿ ಹಾಕಿದರು. ಕೊಲ್ಹಾಪುರದಲ್ಲಿ ಛತ್ರಪತಿ ಶಾಹು ಮಹಾರಾಜರೂ ಹಿಂದುಳಿದ ಬಹುಜನರಿಗೆ ಪ್ರಾತಿನಿಧ್ಯ ಕಲ್ಪಿಸಿದ್ದರು ಎಂದು ನೆನಪಿಸಿದರು.

ಕರ್ನಾಟಕದಲ್ಲಿ ದೇವರಾಜ ಅರಸು ಅವರ ಅವಧಿಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ಚಳವಳಿ ಹೊಸ ದಿಕ್ಕು ಪಡೆಯಿತು. 1972ರಲ್ಲಿ ಎಲ್.ಜಿ. ಹಾವನೂರು ನೇತೃತ್ವದಲ್ಲಿ ರಚನೆಯಾದ ಆಯೋಗದ ವರದಿ ರಾಜ್ಯದಲ್ಲಿ ಮೌನ ಸಾಮಾಜಿಕ ಕ್ರಾಂತಿಗೆ ಮಾರ್ಗದರ್ಶಿಯಾಯಿತು ಎಂದು ಹರಿಪ್ರಸಾದ್ ಹೇಳಿದರು.
2017 ಮತ್ತು 2018ರಲ್ಲಿ ರಾಜ್ಯಸಭೆಯಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆ ಕುರಿತು ಮಾತನಾಡಿದ್ದನ್ನು ಸ್ಮರಿಸಿದ ಅವರು, ಓಬಿಸಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸುವ ಸಂವಿಧಾನದ 340ನೇ ವಿಧಿ ಅತ್ಯಂತ ಮಹತ್ವದ್ದಾಗಿದೆ ಎಂದರು.
ಓಬಿಸಿ ಮೀಸಲಾತಿಯಲ್ಲಿ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ವಿರೋಧಿಸಬೇಕು ಎಂದು ತಾವು ಸಂಸತ್ತಿನಲ್ಲೇ ಎಚ್ಚರಿಸಿದ್ದೆ. 2021ರ ಮರಾಠ ಮೀಸಲಾತಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನಲ್ಲೂ ತಮ್ಮ ಅಂದಿನ ಸಂಸತ್ ಭಾಷಣ ಉಲ್ಲೇಖವಾಗಿತ್ತು ಎಂದು ಹೇಳಿದರು.
ಮೀಸಲಾತಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂಬ ವಾದ ಸರಿಯಲ್ಲ. ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಸಾಮಾಜಿಕ ನ್ಯಾಯದ ನೀತಿಗಳ ಮೂಲಕ ಶಿಕ್ಷಣ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟರು.
ದೇಶದಲ್ಲಿ ಓಬಿಸಿ ಹಾಗೂ ಜಾತಿ ಜನಗಣತಿ ನಡೆಸಬೇಕು ಎಂಬ ಬೇಡಿಕೆ ಈಡೇರಿರುವ ಹಿನ್ನೆಲೆಯಲ್ಲಿ, ಅದರ ವರದಿಯನ್ನು ಜಾರಿಗೊಳಿಸಲು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ ಎಂದು ಅವರು ಕರೆ ನೀಡಿದರು.
“ಸಂವಿಧಾನವನ್ನು ರಕ್ಷಿಸಿದರೆ ಮಾತ್ರ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ನಮ್ಮ ಹಕ್ಕುಗಳಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧರಾಗಬೇಕು” ಎಂದು ಹರಿಪ್ರಸಾದ್ ಹೇಳಿದರು.







































































