ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS-II) 2025ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA)ಯಲ್ಲಿ ತರಬೇತಿಗೆ 483 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
UPSC ನಡೆಸಿದ ಲಿಖಿತ ಪರೀಕ್ಷೆ ಹಾಗೂ ರಕ್ಷಣಾ ಸಚಿವಾಲಯದ ಸರ್ವಿಸಸ್ ಸೆಲೆಕ್ಷನ್ ಬೋರ್ಡ್ (SSB) ನಡೆಸಿದ ಸಂದರ್ಶನದಲ್ಲಿನ ಸಾಧನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದವರು 124ನೇ ಶಾರ್ಟ್ ಸರ್ವಿಸ್ ಕಮಿಷನ್ (ಪುರುಷರು) ಹಾಗೂ 124ನೇ ಶಾರ್ಟ್ ಸರ್ವಿಸ್ ಕಮಿಷನ್ (ಮಹಿಳೆಯರು) ಕೋರ್ಸ್‌ಗಳಿಗೆ ಸೇರ್ಪಡೆಯಾಗಲಿದ್ದು, ಎರಡೂ ಕೋರ್ಸ್‌ಗಳು ಅಕ್ಟೋಬರ್ 2026ರಲ್ಲಿ ಆರಂಭವಾಗಲಿವೆ.

ಒಟ್ಟು 483 ಅಭ್ಯರ್ಥಿಗಳ ಪೈಕಿ 455 ಮಂದಿ ಪುರುಷರು ಹಾಗೂ 28 ಮಂದಿ ಮಹಿಳೆಯರು ಇದ್ದಾರೆ. ಪುರುಷರ ಕೋರ್ಸ್‌ಗೆ 276 ಹಾಗೂ ಮಹಿಳಾ ಕೋರ್ಸ್‌ಗೆ 19 ಸೇರಿದಂತೆ ಒಟ್ಟು 295 ಹುದ್ದೆಗಳನ್ನು ಪ್ರಕಟಿಸಲಾಗಿತ್ತು.
ಪುರುಷರ ಕೋರ್ಸ್‌ನ ಮೆರಿಟ್ ಪಟ್ಟಿಯಲ್ಲಿ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿ (IMA), ಎಜಿಮಲಾದ ಇಂಡಿಯನ್ ನೇವಲ್ ಅಕಾಡೆಮಿ (INA) ಹಾಗೂ ಹೈದರಾಬಾದ್‌ನ ಏರ್ ಫೋರ್ಸ್ ಅಕಾಡೆಮಿ (AFA) ಪ್ರವೇಶಕ್ಕೆ ಇದೇ ಪರೀಕ್ಷೆಯ ಮೂಲಕ ಈಗಾಗಲೇ ಶಿಫಾರಸು ಮಾಡಲಾದ ಅಭ್ಯರ್ಥಿಗಳೂ ಸೇರಿದ್ದಾರೆ.
ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳನ್ನು ಮೆರಿಟ್ ಪಟ್ಟಿ ಸಿದ್ಧಪಡಿಸುವಾಗ ಪರಿಗಣಿಸಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಭ್ಯರ್ಥಿಗಳ ಆಯ್ಕೆ ತಾತ್ಕಾಲಿಕವಾಗಿದ್ದು, ಜನ್ಮ ದಿನಾಂಕ ಮತ್ತು ಶೈಕ್ಷಣಿಕ ಅರ್ಹತೆಗಳ ಪರಿಶೀಲನೆ ಪೂರ್ಣಗೊಳ್ಳಬೇಕಿದೆ.
ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಿಮ ಫಲಿತಾಂಶ ಪರಿಶೀಲಿಸಬಹುದು. ಫಲಿತಾಂಶ ಪ್ರಕಟವಾದ 15 ದಿನಗಳ ಒಳಗೆ ವೈಯಕ್ತಿಕ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ಅಂಕಗಳು 30 ದಿನಗಳವರೆಗೆ ಲಭ್ಯವಿರುತ್ತವೆ.
ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಅಥವಾ ಸ್ಪಷ್ಟೀಕರಣಕ್ಕಾಗಿ ಅಭ್ಯರ್ಥಿಗಳಿಗೆ UPSC ಆವರಣದಲ್ಲಿ ಸೌಲಭ್ಯ ಕೌಂಟರ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.







































































