ಮಂಗಳೂರು: ತುಳುನಾಡು ವಿವಿಧ ಭಾಷೆಗಳ ನೆಲೆವೀಡಾಗಿದ್ದು, ಇಲ್ಲಿನ ಪ್ರತಿಯೊಂದು ಸಮುದಾಯದವರೂ ತಮ್ಮ ತಾಯ್ನುಡಿಯ ಬಗ್ಗೆ ಅಭಿಮಾನ ಹೊಂದಬೇಕು ಎಂದು ಲೇಖಕ ಡಾ. ವಾಸುದೇವ ಬೆಳ್ಳೆ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಸಹಯೋಗದಲ್ಲಿ ತುಳುಭವನದಲ್ಲಿ ಆಯೋಜಿಸಿದ್ದ ಆರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಭಾಷೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡಿರುವ ತುಳುನಾಡಿನ ವೈವಿಧ್ಯವೇ ಅದರ ವಿಶೇಷತೆ. ಪ್ರತಿಯೊಂದು ಭಾಷೆಯೂ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆ ಮತ್ತು ವೈಶಿಷ್ಟ್ಯವನ್ನು ಹೊಂದಿದ್ದು, ಅವುಗಳ ಉಳಿವು ಹಾಗೂ ಬೆಳವಣಿಗೆಗೆ ಭಾಷಾಭಿಮಾನ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ವಹಿಸಿದ್ದರು. ಲೇಖಕಿ ಡಾ. ಝೀಟಾ ಲೋಬೋ, ಕವಿ ಯು.ಕೆ. ಖಾಲಿದ್ ಉಳ್ಳಾಲ್ಕಾರ್ ಹಾಗೂ ವಿ.ಬಿ. ಆಚಾರ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.
14 ಭಾಷೆಗಳಲ್ಲಿ ಕವಿತೆಗಳ ವಾಚನ
ಬಹುಭಾಷಾ ಕವಿಗೋಷ್ಠಿಯಲ್ಲಿ ತುಳು, ಶಿವಳ್ಳಿ ತುಳು, ಮಾವಿಲನ್ ತುಳು, ಅರೆಭಾಷೆ, ಚಿತ್ಪಾವನಿ, ಬ್ಯಾರಿ, ಮರಾಠಿ, ಕೊಂಕಣಿ, ಕುಂದಗನ್ನಡ, ಕೊರಗ ಭಾಷೆ, ಕರಾಡ, ಮಲೆಯಾಳಂ, ಕನ್ನಡ ಮತ್ತು ಹವ್ಯಕ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕವಿತೆಗಳನ್ನು ವಾಚಿಸಲಾಯಿತು.
ಶಾರದಾ ಶೆಟ್ಟಿ (ತುಳು), ವಿಜಯರಾಜ್ ಪುಣಿಂಚತ್ತಾಯ (ಶಿವಳ್ಳಿ ತುಳು), ರಾಜೇಂದ್ರ ಟಿ. ಕಾರಿಕೆ (ಮಾವಿಲನ್ ತುಳು), ಪ್ರೊ. ಸಂಜೀವ ಕುದ್ಪಾಜೆ (ಅರೆಭಾಷೆ), ಶರತ್ ಕುಮಾರ್ ತುಳುಪುಳೆ (ಚಿತ್ಪಾವನಿ), ಆಯಿಷಾ ಯು.ಕೆ. (ಬ್ಯಾರಿ), ಸುಭಾಷ್ ಪೆರ್ಲ (ಮರಾಠಿ), ಆಂಡ್ರ್ಯೂ ಎಲ್. ಡಿ. ಡಿಕೂನ್ಹಾ (ಕೊಂಕಣಿ), ಮಂಜುನಾಥ ಗುಂಡ್ಮಿ (ಕುಂದಗನ್ನಡ), ದೀಪಿಕಾ ಉಡುಪಿ (ಕೊರಗ ಭಾಷೆ), ಜೋತ್ಸ್ನ ಎಂ. ಕಡಂದೇಲು (ಕರಾಡ), ರವೀಂದ್ರನ್ ಪಾಡಿ (ಮಲೆಯಾಳಂ), ಶ್ರೀ ಮುದ್ರಾಡಿ (ಕನ್ನಡ), ಮಂಗಳಾ ಎಸ್. ಭಟ್ (ಕೊಂಕಣಿ), ವನಜಾಕ್ಷಿ ಪಿ. ಚೆಂಬ್ರಕಾನ (ಕನ್ನಡ) ಹಾಗೂ ಎನ್. ಸುಬ್ರಾಯ ಭಟ್ (ಹವ್ಯಕ) ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಸ್ವಾಗತಿಸಿದರು. ಸದಸ್ಯ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರೂಪಿಸಿದರು. ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ವಂದಿಸಿದರು.
















































































