ಬೆಂಗಳೂರು: ರಾಜ್ಯದಲ್ಲಿನ ರೆಮ್‌ಡಿಸಿವಿರ್ ಕರ್ಮಕಾಂಡ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುವಂತೆಯೇ ಪ್ರತಿಪಕ್ಷ ಕಾಂಗ್ರೆಸ್ ಕೂಡಾ ವ್ಯವಸ್ಥೆಯ ವಿರುದ್ದ ಸಿಡಿದೆದ್ದಿದೆ. ಈ ಅವಾಂತರಗಳಿಗೆ ಕಾರಣವಾಗಿರುವ ಆರೋಗ್ಯ ಸಚಿವ ಸುಧಾಕರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಿದ್ದು, ಸಿಎಂ ಬಿಎಸ್‌ವೈ ಹಾಗೂ ಬಿಜೆಪಿ ನಾಯಕರೂ ಕೂಡಾ ಮುಜುಗರದ ಸ್ಥಿತಿಯನ್ನು ಎದುರಿಸುವಂತಾಗಿದೆ.
ಈ ಕುರಿತಂತೆ ಪ್ರದೇಶ ಕಾಂಗ್ರೆಸ್ ವಕ್ತಾರರೂ ಆದ ಮಾಜಿ ಶಾಸಕ ರಮೇಶ್ ಬಾಬು ಅವರು ಸಿಎಂ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಸರ್ವಜನಿಕರಷ್ಟೇ ಅಲ್ಲ, ಕೇಂದ್ರ ಸಚಿವರು ಕೂಡಾ ಸಚಿವ ಸುಧಾಕರ್ ವೈಖರಿ ಬಗ್ಗೆ ಆಸಮಾಧಾನ ಹೊರಹಾಕಿದ್ದಾರೆ. ಹೀಗಿದ್ದರೂ ಅವರನ್ನು ಸಂಪುಟದಲ್ಲಿ ಮುಂದುವರಿಸಿರುವ ಉದ್ದೇಶವಾದರೂ ಏನು? ಎಂದು ರಮೇಶ್ ಬಾಬು ಪ್ರಶ್ನಿಸಿ ಕಮಲ ನಾಯಕರ ನಡೆ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆರೋಗ್ಯ ಸಚಿವರನ್ಬು ಸಂಪುಟದಿಂದ ಕಿತ್ತೊಗೆಯಿರಿ, ಇಲ್ಲವೇ ನೀವೇ ರಾಜೀನಾಮೆ ನೀಡಿ ಎಂದು ಅವರು ಆಗ್ರಹಿಸಿದ್ದಾರೆ.
ರಮೇಶ್ ಬಾಬು ಅವರ ಪತ್ರ ಹೀಗಿದೆ.
ಮಾನ್ಯ ಶ್ರೀ ಯಡಿಯೂರಪ್ಪ ರವರೇ, ಕೋವಿಡ್ ವಿರುದ್ಧ ಸಂಘಟಿತ ಹೋರಾಟಕ್ಕೆ ತಾವು ಕರೆ ನೀಡಿರುತ್ತೀರಿ. ಪಕ್ಷ ರಾಜಕಾರಣದ ಸಮಯ ಇದು ಅಲ್ಲವೆಂಬುದು ಎಲ್ಲರಿಗೂ ಗೊತ್ತು. ಆದರೆ ನಿಮ್ಮದೇ ಸರ್ಕಾರದ ವೈಫಲ್ಯ, ನಿಮ್ಮ ಮಂತ್ರಿಗಳ ಅಸಡ್ಡೆ, ಸಮನ್ವಯದ ಕೊರತೆ, ಪರಸ್ಪರರ ಆರೋಪ, ಮಾನವೀಯ ಮೌಲ್ಯಗಳ ಮೀರಿ ನಡೆದ ತೆರೆ ಹಿಂದಿನ ವ್ಯಾಪಾರ ನಮ್ಮ ರಾಜ್ಯದ ಸಾವಿರಾರು ಜನರ ಪ್ರಾಣ ಮತ್ತು ಬದುಕನ್ನು ಕಸಿದಿಲ್ಲವೇ? ಎಂದಾದರೂ ನೀವೂ ನಿಮ್ಮ ಮಂತ್ರಿಗಳನ್ನು ನಿಯಂತ್ರಿಸಿ ಆಡಳಿತವನ್ನು ಸರಿದಾರಿಗೆ ತರುವ, ವಿಪಕ್ಷಗಳ ವಿಶ್ವಾಸಕ್ಕೆ ಪಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರ? ನಿಮ್ಮ ವೈಫಲ್ಯಕ್ಕೆ ನ್ಯಾಯಾಲಯ ಛೀಮಾರಿ ಹಾಕಿಲ್ಲವೇ?
ಕೋವಿಡ್ ಪೀಡಿತರ ಹೆಸರಿನಲ್ಲಿ ಧಂಧೆ ಮಾಡಿದ ಆರೋಪ ಕಳೆದ ವರ್ಷ ಬಂದಾಗ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಕಳಂಕಿತರನ್ನು ಹೊರಗೆ ದಬ್ಬಿದ್ದರೆ ಇಂದು ರಾಜ್ಯ ಅತಂತ್ರ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಹಾಸಿಗೆಯಿಂದ ಹಿಡಿದು ಆಕ್ಸಿಜನ್ ರೆಂಡಿಸಿವರ್ ವರೆಗೆ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ನಿಮ್ಮದೇ ಸರ್ಕಾರದ ಶಾಸಕರು, ಮಂತ್ರಿಗಳು ಕೇಂದ್ರ ಮಂತ್ರಿಗಳು ಆರೋಗ್ಯ ಸಚಿವರ ಮೇಲೆ ನೇರವಾಗಿ ಆರೋಪಿಸಿದ್ದಾರೆ. ಸ್ವಾಮೀಜಿ ಭೇಟಿ ಹೆಸರಿನಲ್ಲಿ ಇತ್ತೀಚಿನ ಸಚಿವರ ಹೆಲಿಕಾಪ್ಟರ್ ಪ್ರವಾಸವೂ ಅನುಮಾನಕ್ಕೆ ತೆರಿದುಕೊಂಡಿದೆ. ರಾಜ್ಯದ ಇಡೀ ಆರೋಗ್ಯ ವ್ಯವಸ್ಥೆ ಕುಸಿದು ಪ್ರತಿದಿನ ಜನ ಸಾಮಾನ್ಯರ ಪ್ರಾಣ ಹಾನಿ ಸಂಭವಿಸಿದೆ. ಇಷ್ಟಾದರೂ ಒಬ್ಬ ಆರೋಗ್ಯ ಸಚಿವರನ್ನು ಕಿತ್ತೊಗೆಯಲು ಸಾಧ್ಯವಾಗದ ನೀವು ಈಗ ಸಂಘಟಿತ ಹೋರಾಟ ಎಂಬ ಅನಿವಾರ್ಯದ ಹತಾಶೆಯ ಹೇಳಿಕೆಗೆ ಶರಣಾಗಿದ್ದೀರಿ.
ರಾಜ್ಯಾದ್ಯಂತ ರೆಮಡಿಸಿವರ್ ಚುಚ್ಚುಮದ್ದು ಧಂಧೆ ಎಗ್ಗಿಲ್ಲದೆ ನಡೆಯಲು ರಾಜ್ಯ ಸರ್ಕಾರ ಆರೋಗ್ಯ ಸಚಿವರು ಕಾರಣವಲ್ಲವೇ? ಆರೋಗ್ಯ ಇಲಾಖೆ ಅಡಿಯಲ್ಲಿ ಬರುವ ಔಷಧ ನಿಯಂತ್ರಣ ಇಲಾಖೆ ರೆಂಡಿಸಿವರ್ ಕಾಳ ಸಂತೆ ಮಾರಾಟ ತಡೆಯಲು, ನಕಲಿ ಚುಚ್ಚುಮದ್ದು ಬಯಲು ಮಾಡಲು ಕೈಚೆಲ್ಲಿದೆ. ಇದರ ಹಿಂದೆ ದೊಡ್ಡ ಲಾಭಿ ಇದ್ದು ಸಚಿವರೂ ಶಾಮಿಲಾಗಿದ್ದಾರೆ.
14.5.21ರ ಔಷಧ ನಿಯಂತ್ರಣ ಇಲಾಖೆ ಮಾಹಿತಿ ಪ್ರಕಾರ ಸರ್ಕಾರಿ ಆಸ್ಪತ್ರೆಗೆ 1,56,865 ಮತ್ತು ಖಾಸಗಿಗೆ 2,55,677 ಒಟ್ಟು 4,12,542 ರೇಮಡಿಸಿವರ್ ಚುಚ್ಚುಮದ್ದು ನೀಡಲಾಗಿದೆ. ಅಂದರೆ ಸರ್ಕಾರಿ ಆಸ್ಪತ್ರೆಗಿಂತ ಖಾಸಗಿಯವರಿಗೆ ಹೆಚ್ಚು ನೀಡಿ ಧಂಧೆ ಮಾಡಲಾಗಿದೆ. ರಾಜ್ಯ ಸರ್ಕಾರ ಔಷಧಿ ನಿಯಂತ್ರಣ ಇಲಾಖೆಯಿಂದ ಆಸ್ಪತ್ರೆಗಳ ಮೂಲಕ ಕೋವಿಡ್ ಸೋಂಕಿತರಿಗೆ ನೀಡಿರುವ ರೆಂಡಿಸಿವರ್ ಚುಚ್ಚುಮದ್ದು ವಿವರ ಹೆಸರು ಸಹಿತ ಬಹಿರಂಗ ಮಾಡಿ. ಆಗ ಆರೋಗ್ಯ ಸಚಿವರ, ಅಧಿಕಾರಿಗಳ ಒಳ ಒಪ್ಪಂದ ತೆರೆದುಕೊಳ್ಳುತ್ತದೆ. ನಿಗದಿತ ಸಮಯದಲ್ಲಿ ಈ ಚುಚ್ಚುಮದ್ದು ಸೋಂಕಿತರಿಗೆ ತಲುಪಿದ್ದರೆ ಸಾವಿರಾರು ಜನರ ಪ್ರಾಣ ಉಳಿಯುತ್ತಿತ್ತು. ಅದೇ ರೀತಿ ಪ್ರತಿ ದಿನ ರಾಜ್ಯದ ಆಕ್ಸಿಜನ್ ಘಟಕಗಳು ಸುಮಾರು 700 ರಿಂದ 900 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದು, ಹೆಚ್ಚು ಖಾಸಗಿ ಆಸ್ಪತ್ರೆಗೆ ಅಕ್ರಮವಾಗಿ ನೀಡಿದ್ದಾರೆ.
ಔಷಧ ನಿಯಂತ್ರಣ ಇಲಾಖೆಯಲ್ಲಿ ಔಷಧ ನಿಯಂತ್ರಕರೂ ಸೇರಿ 16 ಅಧಿಕಾರಿಗಳು ರಾಜ್ಯ ವ್ಯಾಪ್ತಿಯ ತಪಾಸಣೆ ಅಧಿಕಾರ ಹೊಂದಿದ್ದಾರೆ. ಇದಲ್ಲದೆ 11 ವಲಯವಾರು, ಅವರ ಕೆಳಗೆ ಜಿಲ್ಲಾ ವಾರು ತಪಾಸಣೆ ಅಧಿಕಾರಿಗಳು ಇದ್ದು, ನಕಲಿ ಔಷಧಿ ಕಳಪೆ ಔಷಧಿ ನಿಷಿದ್ಧ ಔಷಧಿ ಕಾಳ ಧಂದೆ ತಡೆಯುವ ಅಧಿಕಾರ ಇದೆ. ಪ್ರಮುಖವಾಗಿ ಈ ಇಲಾಖೆಯಲ್ಲೇ ಇನ್ನೊಂದು ಇಂಟೆಲಿಜೆನ್ಸ್ ವಿಭಾಗ ಇದ್ದು ಇಂತಹ ತನಿಖೆ ಮತ್ತು ನಿಯಂತ್ರಣ ಆದ್ಯತೆ ಮೇಲೆ ಮಾಡಬೇಕು. ಈ ಇಲಾಖೆ ಸಂಪೂರ್ಣ ನಿಷ್ಕ್ರಿಯದ ಹಿಂದೆ ಅನೇಕ ಅನುಮಾನ ಗಳಿವೆ. ಆರೋಗ್ಯ ಇಲಾಖೆ ಸಚಿವರು ಕೋವಿಡ್ ಸಮಯದಲ್ಲಿ ಈ ಇಲಾಖೆಯ ಜನರ ಸೇವೆಯ ಬದಲು ತಮ್ಮ ಸೇವೆಗೆ ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ. ಇಂತಹ ಧಂದೆ ಕಂಡೂ, ಜನಸಾಮಾನ್ಯರ ಪ್ರಾಣ ಬದುಕು ಬೀದಿಗೆ ಬಂದರೂ ನಿಮ್ಮ ಅಸಹಾಯಕತೆಗಾಗಿ ಪ್ರತಿಪಕ್ಷ ಸಂಘಟಿತ ಹೋರಾಟಕ್ಕೆ ಅಣಿಯಾಗಬೇಕೆ?
ಮಾನ್ಯ ಮುಖ್ಯಮಂತ್ರಿಗಳೇ ದಯಮಾಡಿ ಅವಕಾಶವಾದದ ಇಂತಹ ಹೇಳಿಕೆಗಳ ನಿಲ್ಲಿಸಿ. ಬೆಡ್ ಬ್ಲಾಕಿಂಗ್, ಆಕ್ಸಿಜನ್ ವ್ಯಾಪಾರ, ರೇಮಡಿಸಿವರ್ ಧಂಧೆ ತಡೆದು ಜನರ ಪ್ರಾಣ ಉಳಿಸಿ. ಜನರಿಗೆ ಅಗತ್ಯವಾದ ಲಸಿಕಿ ನೀಡುವಲ್ಲಿ ವಿಫಲವಾದ ಸರಕಾರದ ಹೊಣೆಯನ್ನು ಯಾರು ಹೊರಬೇಕು? ಕೇಂದ್ರ ಸರ್ಕಾರ ನೀಡಿದ (ನೀಡಿದ್ದರೆ?) ಆಕ್ಸಿಜನ್ ಮತ್ತು ಚುಚ್ಚುಮದ್ದು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಸಚಿವ ಸದಾನಂದ ಗೌಡರೇ ಆರೋಗ್ಯ ಸಚಿವರತ್ತ ಕೈ ತೋರಿಸಿದ್ದಾರೆ. ದಯಮಾಡಿ ಜನರ ಪ್ರಾಣ ಮತ್ತು ಬದುಕಿನೊಂದಿಗೆ ಆಡಿದ ಆಟ ಸಾಕು. ಮೊದಲು ಆರೋಗ್ಯ ಸಚಿವರನ್ನು ಖಾತೆಯಿಂದ ಕಿತ್ತೊಗಿಯಿರಿ. ನಿಮಗೆ ಆ ತಾಕತ್ತು ಇಲ್ಲದೇ ಹೋದರೆ ಗೌರವದಿಂದ ನಿಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಈ ರಾಜ್ಯದ ಜನರ ಕ್ಷಮೆ ಕೇಳಿ.
ರಮೇಶ್ ಬಾಬು,ExMLC
ವಕ್ತಾರ- ಕೆಪಿಸಿಸಿ, ಬೆಂಗಳೂರು,