ಮಂಗಳೂರು: ಹಿಂದೂ ದೇವರನ್ನು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡಿದ ಪ್ರಕರಣದಲ್ಲಿ ಉಳ್ಳಾಲ ಪೊಲೀಸರು ತೊಕ್ಕೊಟ್ಟು ನಿವಾಸಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಸ್ವಾಲಿಝ್ ಇಕ್ಬಾಲ್ ಎಂಬಾತ ಸ್ಥಳೀಯ ಉದ್ಯಮಿಯೂ ಆಗಿದ್ದಾನೆ.
ಚಾಮುಂಡೇಶ್ವರಿ ದೇವಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಹಾಗೂ ಉಳ್ಳಾಲ ಠಾಣೆಯ ಪೊಲೀಸರು ದೂರು ದಾಖಲಿಸಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ ಉಳ್ಳಾಲ ಠಾಣೆಯ ಪೊಲೀಸರು ಸ್ವಾಲಿಝ್ ಇಕ್ಬಾಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದ ನಿವಾಸಿಯಾಗಿದ್ದು ಫರ್ನಿಚರ್ ಅಂಗಡಿ ನಡೆಸುತ್ತಿದ್ದಾನೆ ಎನ್ನಲಾಗಿದೆ.