ಬೆಂಗಳೂರು, ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಏಕೆ ವಿರೋಧ ಏಕೆ ಎಂದು ಕಾಂಗ್ರೆಸ್ ನಾಯಕರನ್ನು ಬಿಜೆಪಿ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ, ಕರ್ನಾಟಕದಲ್ಲಿ 10 ಲಕ್ಷಕ್ಕೂ ಅಧಿಕ ಬಾಂಗ್ಲಾ ಪ್ರಜೆಗಳಿದ್ದಾರೆ. ಇಲ್ಲ ಎಂದು ಯಾರಾದರೂ ಸವಾಲು ಹಾಕಿದರೆ ನಾನೇ ಅವರನ್ನು ಕರೆದುಕೊಂಡು ಹೋಗಿ ತೋರಿಸುತ್ತೇನೆ. ಇತ್ತೀಚೆಗೆ ಪೊಲೀಸ್ ಆಯುಕ್ತರು 65 ಲಕ್ಷ ರೂ. ಖರ್ಚು ಮಾಡಿ 250 ಬಾಂಗ್ಲಾ ದೇಶದವರನ್ನು ವಿಮಾನದಲ್ಲಿ ಕಳುಹಿಸಿ ಗಡಿವರೆಗೆ ಬಿಟ್ಟು ಬಂದಿದ್ದಾರೆ. ಮಹದೇವಪುರ, ಚಿಕ್ಕಮಗಳೂರು, ಕೊಡಗು ಕಾಫಿ ಎಸ್ಟೇಟ್‌ಗಳಲ್ಲಿ ಸಾವಿರಾರು ಬಾಂಗ್ಲಾ ದೇಶೀಯರಿದ್ದಾರೆ. ಇದಕ್ಕೆ ಎಸ್‌ಐಆರ್ ಅಂತ್ಯ ಹಾಡಲಿದೆ. ಗುರುತಿನ ಚೀಟಿ ಇರುವವರು ಭಯ ಪಡಬೇಕಿಲ್ಲ. ಪ್ರತಿ ಬೂತ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಏಜೆಂಟ್ ಇರುವಾಗ ಅರ್ಹ, ನಿಜವಾದ ಮತದಾರರ ಹೆಸರು ರದ್ದಾಗಲು ಸಾಧ್ಯವೇ ಇಲ್ಲ ಎಂದು ಗಮನಸೆಳೆದರು.
ಬಾಂಗ್ಲಾ ದೇಶದ ಮುಸ್ಲಿಮರ ಮತಗಳಿಂದ ಗೆಲ್ಲುತ್ತೇವೆಂದು ಕಾಂಗ್ರೆಸ್ ಕನಸು ಕಂಡಿತ್ತು. ಎಸ್ ಐ ಆರ್ ನಿಂದ ಅದು ಆಗುವುದಿಲ್ಲ ಎಂಬ ಕಾರಣದಿಂದ ಕಾಂಗ್ರೆಸ್ ನಾಯಕರು ಭಯಪಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹೆಸರು ರದ್ದಾದವರಲ್ಲಿ ಹೆಚ್ಚು ಹಿಂದೂಗಳಿದ್ದಾರೆ. ಇದರ ವಿರುದ್ಧ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಪ್ರತಿಭಟಿಸಿಲ್ಲ. ರಾಜ್ಯದಲ್ಲಿ 10 ಲಕ್ಷ ಬಾಂಗ್ಲಾ ನಿವಾಸಿಗಳಿಗೆ ಗುರುತಿನ ಚೀಟಿ ಕೊಟ್ಟಿದ್ದು, ಅವರನ್ನು ಕಳುಹಿಸಬಾರದೆಂದು ಕಾಂಗ್ರೆಸ್ ಬಯಸುತ್ತಿದೆ ಎಂದರು.
ಕಳೆದ 49 ತಿಂಗಳಿಂದ ಪ್ರಧಾನಿ ಮೋದಿ ತೈಲ ದರ ಏರಿಸಿಲ್ಲ. ಯುದ್ಧದ ವಾತಾವರಣ ಇರುವುದರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಕಾಂಗ್ರೆಸ್‌ನ ಪ್ರಕಾರ, ಇಡೀ ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ತೈಲ ದರ ಏರಿಕೆಯಾಗಿದೆ. ಮಲೇಷಿಯಾದಲ್ಲಿ 71%, ಪಾಕಿಸ್ತಾನದಲ್ಲಿ 44%, ಯುಎಇನಲ್ಲಿ 86%, ಯುಎಸ್‌ನಲ್ಲಿ 48%, ಶ್ರೀಲಂಕಾದಲ್ಲಿ 41% ನೇಪಾಳದಲ್ಲಿ 51% ಏರಿಕೆಯಾಗಿದೆ. ಆದರೆ ಭಾರತದಲ್ಲಿ ಅತಿ ಕಡಿಮೆ ಎಂದರೆ 3% ಏರಿಕೆಯಾಗಿದೆ. ಇಷ್ಟಿದ್ದರೂ ಪ್ರಧಾನಿ ಮೋದಿ ಸಮರ್ಥರಿಲ್ಲ, 56 ಇಂಚಿನ ಎದೆ ಎಂದು ಟೀಕಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರಿಗೆ ಎದೆ ಹೊಟ್ಟೆ ಸೇರಿ 96 ಇಂಚು ಆಗಬಹುದು. ಕಾಂಗ್ರೆಸ್ ಸರ್ಕಾರ 2024 ರಲ್ಲಿ ಪೆಟ್ರೋಲ್‌ಗೆ 3 ರೂ. ಹಾಗೂ 2025 ರಲ್ಲಿ 2 ರೂ. ಏರಿಸಿತ್ತು. ನಂದಿನಿ ಹಾಲಿಗೆ 9 ರೂ, ಆಲ್ಕೋಹಾಲ್‌ಗೆ 250%, ವಿದ್ಯುತ್‌ಗೆ 56 ಪೈಸೆ, ನೀರಿಗೆ 3%, ಬಸ್ ದರ 15% ಹಾಗೂ ಮಾರ್ಗಸೂಚಿ ದರವನ್ನು ಲೆಕ್ಕವಿಲ್ಲದಂತೆ ಏರಿಸಲಾಗಿದೆ. ದೇಶ ಸಂಕಷ್ಟದಲ್ಲಿದ್ದಾಗ ಚಿನ್ನದ ಬಳೆ ನೀಡಿ ಎಂದು ಜವಹರಲಾಲ್ ನೆಹರೂ ಕೇಳಿದ್ದರು. ಆದರೆ ಪ್ರಧಾನಿ ಮೋದಿ ಎಂದೂ ಆ ರೀತಿ ಕೇಳದೆ ಮಿತವ್ಯಯ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದು ಅಶೋಕ್ ಹೇಳಿದರು.
ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯಲ್ಲಿ ಈಗ ಕಿಕ್ ಮೇಲೆ ಹೆಚ್ಚು ತೆರಿಗೆ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಇದರ ಜೊತೆಗೆ ಬಸ್ ಟಿಕೆಟ್ ದರ ಏರಿಕೆಗೆ ಸಿದ್ಧತೆ ನಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮನೆಗೆ ಸಂಬಂಧಿಸಿದ ತೆರಿಗೆಗಳ ಪಾವತಿಯನ್ನು ಸರಳೀಕರಣ ಮಾಡುತ್ತೇವೆ. ಎ ಖಾತಾ-ಬಿ ಖಾತಾಗಳನ್ನೂ ಸುಲಲಿತ ಮಾಡುತ್ತೇವೆ. ಅಲ್ಲಿಯವರಿಗೆ ಜನರು ಕಾಯಬೇಕು ಎಂದು ಕೋರಿದರು.






















































