ದೊಡ್ಡಬಳ್ಳಾಪುರ: ಆರೋಗ್ಯಪೂರ್ಣ ಆಹಾರ ಎಂದೇ ಗುರುತಾಗಿರುವ ಸಿರಿಧಾನ್ಯದ ಕುರಿತು ಜಾಗೃತಿ ಮೂಡಿಸಲು ಹಾಗೂ ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡಲು ದೊಡ್ಡಬಳ್ಳಾಪುರದಲ್ಲಿ ಶನಿವಾರ ಮ್ಯಾರಥಾನ್ ನಡೆಯಿತು. ‘ಸಿರಿಧಾನ್ಯದ ನಡಿಗೆ ಆರೋಗ್ಯದ ಕಡೆಗೆ’ ಎಂಬ ಈ ಮ್ಯಾರಥಾನ್ ಯುವಜನರ ಗಮನಸೆಳೆಯಿತು.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರ ವೃತ್ತದಲ್ಲಿ ಈ ಮ್ಯಾರಥಾನ್’ಗೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು. ಪ್ರವಾಸಿ ಮಂದಿರ ವೃತ್ತದಿಂದ ಆರಂಭವಾದ ಮ್ಯಾರಥಾನ್ ಕೋರ್ಟ್ ರಸ್ತೆ, ತಾಲೂಕು ಕಚೇರಿ ವೃತ್ತದಿಂದ ಮೂಲಕ ಸಾಗಿದ ಓಟ, ಬಸವ ಭವನ ವೃತ್ತದ ಮೂಲಕ ಮೂರು ಕಿಲೋಮೀಟರ್ ಸಾಗಿ ಮತ್ತೆ ಪ್ರವಾಸಿ ಮಂದಿರದಲ್ಲಿ ಕೊನೆಯಾಯಿತು. ಇದೇ ಸಂದರ್ಭದಲ್ಲಿ ಸಾಮೂಹಿಕ ವ್ಯಾಯಾಮ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಸಾವಯವ ಸಿರಿಧಾನ್ಯದ ಕುರಿತು ಜಾಗೃತಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ರೈತರ ಕೊಡುಗೆ ಅಪಾರ. ಅವರ ಮನವೊಲಿಸಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ ರಸಗೊಬ್ಬರಗಳ ಅತಿಯಾದ ಬಳಕೆ ಆಗುತ್ತಿದೆ. ರಾಸಾಯನಿಕದ ಬಳಕೆಯಿಂದ ನಮ್ಮಭೂಮಿ ಫಲವತ್ತತೆಯನ್ನು ಹಾಳು ಮಾಡುತ್ತಿದ್ದೇವೆ. ನಮ್ಮ ಹಿರಿಯರು ನೀಡಿದ ಭೂಮಿ ಪ್ರಕೃತಿಯನ್ನು ರಕ್ಷಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ತಹಶೀಲ್ದಾರ್ ಟಿ ಎಸ್ ಶಿವರಾಜ್ ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಚಂದ್ರ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ್ ಸಬ್ ಇನ್ಸ್ ಪೆ ಕ್ಟರ್ ಸೋಮಶೇಖರ್, ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ, ತಾಂತ್ರಿಕ ಅಧಿಕಾರಿ ರೂಪ ಸಾರ್ವಜನಿಕರು ರೈತರು ಜಾಥಾದಲ್ಲಿ ಪಾಲ್ಗೊಂಡಿದ್ದರು.