ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (NEP)-2020ಕ್ಕೆ ಅನುಗುಣವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ವೇಗದ ನಿಯಂತ್ರಕ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಮಾನ್ಯತೆ ಪ್ರಕ್ರಿಯೆಗಾಗಿ ಏಕೀಕೃತ ಆನ್‌ಲೈನ್ ಪೋರ್ಟಲ್ ಆರಂಭಿಸಲಾಗಿದೆ.
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್, ಉನ್ನತ ಶಿಕ್ಷಣ ಸಂಸ್ಥೆಗಳಿಗೆ 2(f) ಮತ್ತು 12B ಮಾನ್ಯತೆ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಈ ಡಿಜಿಟಲ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹೊಸ ಪೋರ್ಟಲ್ ಮೂಲಕ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಮಾನ್ಯತೆಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದ್ದು, ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ದಕ್ಷತೆ ಹಾಗೂ ಸಮಯದ ಉಳಿತಾಯ ಸಾಧ್ಯವಾಗಲಿದೆ.

ಇದರ ಜೊತೆಗೆ, ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನ, ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಮಾನ್ಯತೆ ಹಾಗೂ ಮುಕ್ತ ಮತ್ತು ದೂರಶಿಕ್ಷಣ (ODL) ಮತ್ತು ಆನ್‌ಲೈನ್ ಶಿಕ್ಷಣ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲು ಯುಜಿಸಿ ಹಲವು ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರೂಪಿಸಲಾಗಿರುವ ‘ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ ಮಸೂದೆ-2025’ ಸಾರ್ವಜನಿಕ ಸ್ವಯಂ ಬಹಿರಂಗಪಡಿಸುವಿಕೆ ಆಧಾರಿತ ತಂತ್ರಜ್ಞಾನ ಚಾಲಿತ ಏಕ-ಗವಾಕ್ಷಿ ನಿಯಂತ್ರಕ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.
ನಿಯಂತ್ರಕ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಿ, ವಿವೇಚನಾ ಅಧಿಕಾರ ಕಡಿಮೆ ಮಾಡಿ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ಈ ಮಸೂದೆಯನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಗಿದೆ.







































































