ಪ್ರಸ್ತುತ ಪರಿಸ್ಥಿತಿಯಲ್ಲಿ ಲೋಕಸಭೆಗೆ ಚುನಾವಣೆ ನಡೆದರೆ ಫಲಿತಾಂಶ ಹೇಗಿರಬಹುದು? ಕಳೆದ ಚುನಾವಣೆ ವೇಳೆ ಉತ್ತುಂಗದಲ್ಲಿದ್ದ ಪ್ರಧಾನಿ ಮೋದಿ ಜನಪ್ರಿಯತೆ ಈಗಲೂ ವ್ಯಕ್ತವಾಗಬಹುದೇ? ದೆಹಲಿಯಲ್ಲಿನ ರೈತರ ಹೋರಾಟ, ಕೊರೋನಾ ವಿಚಾರದಲ್ಲಿನ ಬೆಳವಣಿಗೆ ಮೋದಿಗೆ ಹೊಡೆತ ಕೊಡಬಹುದೇ? ಎಂಬ ಚರ್ಚೆ ಸಾಗಿರುವಾಗಲೇ ಸಮೀಕ್ಷೆಯೊಂದು ಅಚ್ಚರಿಯ ಫಲಿತಾಂಶವೊಂದನ್ನು ದೇಶದ ಜನರ ಮುಂದಿಟ್ಟಿದೆ.
ಸದ್ಯವೇ ಚುನಾವಣೆ ನಡೆದರೆ ಮೋದಿ ಸಾರಥ್ಯದ ಎನ್‌ಡಿಎ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಬಹುದೆಂಬ ಅಭಿಪ್ರಾಯವು ಇಂಡಿಯಾ ಟುಡೇ ನಡೆಸಿರುವ ಸಮೀಕ್ಷೆಯಿಂದ ವ್ಯಕ್ತವಾಗಿದೆ. ದೆಹಲಿಯಲ್ಲಿನ ರೈತರ ಪ್ರತಿಭಟನೆ ಸೇರಿದಂತೆ ಯಾವುದೇ ಸವಾಲುಗಳು ಮೋದಿ ಮುಂದಿಲ್ಲ. ಆದರೆ ಕಳೆದ ಬಾರಿಗಿಂತ ಅಲ್ಪ ಸಂಖ್ಯೆಗಳನ್ನು ಎನ್‌ಡಿಎ ಕಳೆದುಕೊಳ್ಳಬಹುದೆಂದು ಸಮೀಕ್ಷೆ ಹೇಳಿದೆ.
ಸುಮಾರು 50 ದಿನಗಳಿಂದ ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದು ಈ ಪ್ರತಿಭಟನೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿವೆ. ಹಾಗಾಗಿ ಮೋದಿ ಆಡಳಿತದ ಬಗ್ಗೆ ಜನಾಭಿಪ್ರಾಯ ಹೇಗಿದೆ ಎಂಬ ಬಗ್ಗೆ ಈ ಸಮೀಕ್ಷೆ ಬೆಳಕು ಚೆಲ್ಲಿದೆ.

ಈ ಸಮೀಕ್ಷೆಯ ಹೈಲೈಟ್ಸ್ ಹೀಗಿದೆ
- ಈ ತಿಂಗಳಲ್ಲೇ ಚುನಾವಣೆ ನಡೆದರೂ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ
- ಕಳೆದ ಚುನಾವಣೆಯಲ್ಲಿ 353 ಸ್ಥಾನ ಗೆದ್ದಿದ್ದ ಮೋದಿ ನಾಯಕತ್ವಕ್ಕೆ ಈಗ 321 ಸ್ಥಾನ ಗೆಲ್ಲುವ ಅವಕಾಶ
- ಎನ್‌ಡಿಎಯಿಂದ ಶಿವಸೇನೆ, ಅಕಾಲಿಲಿದಳ ದೂರ ಸರಿದರೂ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಧಕ್ಕೆಯಾಗದು
- ಸದ್ಯದ ಪರಿಸ್ಥಿತಿ ಕಾಂಗ್ರೆಸ್‌ಗೆ ವರದಾನವಾಗಿಲ್ಲ. ಕಳೆದ ಚುನಾವಣೆಯಲ್ಲಿ 93 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಈಗಲೂ 100 ಅಂಕಿಯನ್ನು ತಲುಪುವುದು ಕಷ್ಟಸಾಧ್ಯ
ಮೋದಿ ಕಾರ್ಯವೈಖರಿಗೆ ಶಹಬ್ಬಾಸ್‌ಗಿರಿ
ಪ್ರಸ್ತುತ ಪರಿಸ್ಥಿತಿಯಲ್ಲೂ ಮೋದಿ ಮೋಡಿ ಜನರ ಮನಸ್ಸಿನಲ್ಲಿದೆ ಎಂಬುದೂ ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಉತ್ತಮವಾಗಿದೆ ಎಂದು ಶೇ 44ರಷ್ಟು ಜನರು ಸಹಮತ ವ್ಯಕ್ತಪಡಿಸಿದ್ದಾರೆ. ಶೇಕಡಾ 30ರಷ್ಟು ಮಂದಿ ಅತ್ಯುತ್ತಮ ಎಂದಿದ್ದರೆ, 6ರಷ್ಟು ಮಂದಿ ಮಾತ್ರ ಮೋದಿ ಸಾಧನೆ ಕಳಪೆ ಎಂದಿದ್ದಾರೆ. ಇನ್ನುಳಿದವರು ಸಾಮಾನ್ಯವಾಗಿದೆ ಎಂದೂ ಹೇಳಿದ್ದಾರೆ.

































































