ಬೆಂಗಳೂರು: ಸಿಎಂ ಆದವರು ನಾನೇ ಇನ್ನು 2 ವರ್ಷ ಅಧಿಕಾರದಲ್ಲಿರುತ್ತೇನೆ ಎಂದು ಹೇಳುವ ಅಗತ್ಯವೇನಿದೆ. ಅವರ ಅಧಿಕಾರದ ಬಗ್ಗೆ ನಾವು ಪ್ರಶ್ನಿಸಿದ್ದೇವಾ? ಹಾಗಿದ್ದರೂ ಈ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯ ಏನಿದೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರೇ ಬೇರೆ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುವ ಸ್ಥಿತಿ ಎದುರಾಗಿದೆ ಎಂದರೆ, ಎಲ್ಲೋ ಏನೋ ಯಡವಟ್ಟಾಗಿದೆ, ಅಪಾಯ ಎದುರಾಗಿದೆ ಎಂಬ ಅನುಮಾನ ಮೂಡುತ್ತದೆ ಎಂದು ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದರು.
ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಇಲ್ಲ:
ಇಂಗ್ಲೆಂಡ್ ನಿಂದ ಬಂದವರಿಗೆ ರಾಜ್ಯದಲ್ಲಿ ವಿಳಾಸವಿದೆ. ವಿಮಾನ ನಿಲ್ದಾಣದಲ್ಲೇ ಅವರ ಪರೀಕ್ಷೆ ನಡೆಸಲು ಇವರಿಗೆ ಇದ್ದ ಕಷ್ಟವಾದರೂ ಏನು? ಆಡಳಿತದ ವಿಚಾರದಲ್ಲಿ ಈ ಸರ್ಕಾರ ಎಷ್ಟು ವಿಫಲವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಡಿಕೆಶಿ ಹೇಳಿದರು.
ದೇಶದಲ್ಲಿ ಕೊರೋನಾ ಸೋಂಕು ಹರಡಿಸಿದ್ದೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಎಂದು ಆರೋಪಿಸಿದ ಅವರು, ಆರಂಭದಲ್ಲೇ ಇದನ್ನು ನಿಯಂತ್ರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ರಾಜ್ಯದಿಂದ ಯಾರೂ ಕೂಡ ಹೊರಗಿನವರಿಗೆ ಸೋಂಕು ಹರಡಿಸಿಲ್ಲ. ಬೇರೆ ಭಾಗದಿಂದ ಬಂದವರಿಂದಲೇ ಸೋಂಕು ಹರಡಿದೆ. ಅವರನ್ನು ಮೊದಲೇ ಪರೀಕ್ಷಿಸಿ ನಿಯಂತ್ರಣ ಮಾಡಬೇಕಿತ್ತು ಎಂದು ಸರ್ಕಾರದ ವಿರುದ್ದ ವಾಕ್ಪ್ರಹಾರ ಮಾಡಿದರು.