ಬೆಂಗಳೂರು: ರಾಜ್ಯದಲ್ಲಿ 100ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಶೀಘ್ರವೇ ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲ ನಿರ್ವಹಣೆಯಲ್ಲಿ ಶಾಸಕರ ಪಾತ್ರದ ಕುರಿತು ಸಭೆಯಲ್ಲಿ ಮಾರ್ಗದರ್ಶನ ನೀಡಲಾಗಿದೆ. 102 ತಾಲ್ಲೂಕುಗಳ ಪ್ರವಾಸ ಹಾಗೂ ಪರಿಸ್ಥಿತಿ ಅಧ್ಯಯನ ಪೂರ್ಣಗೊಂಡ ಬಳಿಕ ಬರಪೀಡಿತ ಪ್ರದೇಶಗಳ ಅಂತಿಮ ಘೋಷಣೆ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ. ಕೇಂದ್ರದಿಂದ ಬರ ಪರಿಹಾರ ಪಡೆಯಲು ನಿಯೋಗದೊಂದಿಗೆ ತೆರಳಿ ಮನವಿ ಮಾಡುವುದಾಗಿ ಶಿವಕುಮಾರ್ ಹೇಳಿದರು. ಕುಡಿಯುವ ನೀರಿನ ವ್ಯವಸ್ಥೆಗಾಗಿ ₹1 ಕೋಟಿ ಅನುದಾನ ನೀಡಲಾಗಿದೆ ಎಂದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಜನರ ಹೆಸರುಗಳು ಮತಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದ ಶಿವಕುಮಾರ್, ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು. ಬೂತ್ ಮಟ್ಟದಲ್ಲಿ ಸಭೆ ನಡೆಸಿ ಮತಪಟ್ಟಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಮತದಾನದ ಹಕ್ಕಿನ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಶಾಸಕರಿಗೆ ಸೂಚಿಸಲಾಗಿದೆ ಎಂದು ಅವರು ಆರೋಪಿಸಿದರು.
ಬೆಂಗಳೂರು ನಗರದಲ್ಲಿ ಹಸಿರು ಪ್ರದೇಶ ವಿಸ್ತರಿಸಲು ತುರಹಳ್ಳಿ ಅರಣ್ಯ, ತೊಟ್ಟಿಕಲ್ಲು ಜಲಪಾತ, ಬಿಎಂ ಕಾವಲ್ ಅರಣ್ಯ, ಬಸವಂತಪುರ, ಮಂಡೂರು ಹಾಗೂ ಜ್ಯೋತಿಪುರ ಸೇರಿದಂತೆ 5,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೊಸ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇದರಿಂದ ಪರಿಸರ ಸಂರಕ್ಷಣೆ ಹಾಗೂ ಭವಿಷ್ಯದ ನೀರಿನ ಭದ್ರತೆಗೆ ಒತ್ತು ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.







































































