ಪಾಟ್ನಾ: ಬಿಹಾರದ ಗಂಗಾ ನದಿಯಲ್ಲಿ 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಇಬ್ಬರು ನಾಪತ್ತೆಯಾಗಿದ್ದಾರೆ.
ನದಿಯ ಮಧ್ಯಭಾಗದಲ್ಲಿ ದೋಣಿ ಮಗುಚಿದ್ದು, ಪ್ರತ್ಯಕ್ಷದರ್ಶಿಗಳು, ಸ್ಥಳೀಯ ಮೀನುಗಾರರು ಹಾಗೂ ಗ್ರಾಮಸ್ಥರ ನೆರವಿನಿಂದ 19 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಇಬ್ಬರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿ, 19 ಮಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ನಾಪತ್ತೆಯಾದ ಇಬ್ಬರಿಗಾಗಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ನದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿವೆ.
ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಹಾಗೂ ದೋಣಿಯ ನಿಯಂತ್ರಣ ತಪ್ಪಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.







































































