ಚೆನ್ನೈ: ಪಂಚ ರಾಜ್ಯಗಳ ವಿಧಾನಸಭಾ ಚಿನಾವಣೆ ಮಿನಿ ಮಹಾಸಮರದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ದ್ರಾವಿಡರ ನಾಡು ತಮಿಳುನಾಡು ಭರ್ಜರಿ ರಾಜಕೀಯ ಜಂಘೀಕುಸ್ತಿಯ ಆಖಾಡವೆಂಬಂತೆ ಭಾಸವಾಗುತ್ತಿದೆ.
ತಮಿಳುನಾಡಿನಲ್ಲಿ ಪಾರುಪತ್ಯ ಸ್ಥಾಪಿಸಲು ಬಿಜೆಪಿ ಹರಸಾಹಸ ನಡೆಸುತ್ತಿದ್ದು, ಹೈಕಮಾಂಡ್ ನಿರ್ದೇಶನದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ಸಿ.ಟಿ.ರವಿ ಕಾರ್ಯತಂತ್ರ ಎಲ್ಲರ ಕುತೂಹಲ ಕೆರಳುವಂತೆ ಮಾಡಿದೆ. ಹಲವು ದಿನಗಳಿಂದ ಅವರು ನಡೆಸುತ್ತಿರುವ ಸಭೆ, ರೋಡ್ ಶೋಗಳಿಗೆ ಭಾರೀ ಜನಸಾಗರವೇ ಜಮಾಯಿಸುತ್ತಿದ್ದು ಕಮಲ ಪಾಳಯದಲ್ಲಿ ಇವರು ‘ಸೌತ್ ಇಂಡಿಯನ್ ಹೀರೋ’ ಎಂದೇ ಕರೆಸಿಕೊಳ್ಳುತ್ತಿದ್ದಾರೆ.
ಕರ್ನಾಟಕದ ಮಾಜಿ ಸಚಿವರೂ ಆಗಿರುವ ಸಿ.ಟಿ.ರವಿಗೆ ತಮಿಳುನಾಡು ರಾಜ್ಯದ ಚುನಾವಣಾ ಉಸ್ತುವಾರಿಯನ್ನು ವಹಿಸಿದ್ದು ಜಾತಿ ಮತಗಳನ್ನು ಪೇರಿಸುವ ಚಾಣಾಕ್ಷ ರಣತಂತ್ರದಲ್ಲಿ ಮಗ್ನರಾಗಿದ್ದಾರೆ. ಅವರು ಇಂದು ತಮಿಳುನಾಡಿನ ತಿರುಪತ್ತೂರಿನಲ್ಲಿ ಶೆಫರ್ಡ್ಸ್ ಇಂಡಿಯಾ ಇಂಟರ್ನಾಷನಲ್ ಸಹಯೋಗದೊಂದಿಗೆ ತಮಿಳುನಾಡು ಕುರುಮನ್ ಪಾದ್ಗಾಪ್ಪು ಪೇರವೈ ಹಮ್ಮಿಕೊಂಡಿದ್ದ ಕುರುಬ ಸಮಾಜದ ಸಭೆ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಈ ಸಭೆಯಲ್ಲಿ ಸಿ.ಟಿ.ರವಿ ಕಮಾಲ್ ಗಮನಸೆಳೆಯಿತು.
ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಕುರುಬ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ರವಿ, ಕುರುಬರು ಅಂದರೆ ಕೇವಲ ಕುರಿ ಕಾಯುವವರಲ್ಲ. ಅವರು ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಿದ ಹರಿಕಾರರು” ಎಂದು ಬಣ್ಣಿಸಿದಾಗ ಜನಸ್ತೋಮದ ನಡುವೆ ಭಾರತ್ ಮಾತಾ ಕೀ ಜೈ ಎಂಬ ಜಯಘೋಷ ಮೊಳಗುತ್ತಿತ್ತು.
ಕುರುಬ ಜನಾಂಗ ಪುರಾತನ ಸಮುದಾಯಗಳಲ್ಲಿ ಒಂದು. ಹಿಂದೂ ಧರ್ಮದ ಮೇಲೆ ಪರಕೀಯರಿಂದ ದಾಳಿಯಾದಾಗ ವಿಜಯನಗರ ಸಾಮ್ರಾಜ್ಯಕ್ಕೆ ಮುನ್ನುಡಿ ಬರೆದರು. ನಮ್ಮ ಸಂಸ್ಕೃತಿಯ ರಕ್ಷಣೆಯಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಸಮುದಾಯದ ವೀರ ಪುರುಷರ ಸಾಧನೆಗಳನ್ನು ಸ್ಮರಿಸುತ್ತಾ ಗಮನ ಕೇಂದ್ರೀಕರಿಸಿದರು.
“ಕುರುಬರು ಮೊದಲು ಕುರುಬರ ನಾಡು ಪುಲಾಲ ಎಂಬ ಪಟ್ಟಣವನ್ನು ಸ್ಥಾಪಿಸಿದರು. ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಹಕ್ಕಬುಕ್ಕರು, ನಂತರ ಸಮೃದ್ಧವಾಗಿ ಆಡಳಿತ ನಡೆಸಿದ ಕದಂಬರು, ಪಲ್ಲವರು, ಯಾದವರು, ಇಂಧೋರಿನ ಹೋಳ್ಕರ್ ಬಡೋದಯ ಗಾಯಕವಾಡರು, ರಾಷ್ಟ್ರಕೂಟ… ಇವರೆಲ್ಲಾ ಕುರುಬ ಜನಾಂಗಕ್ಕೆ ಸೇರಿದವರು” ಎಂದು ಸಿ.ಟಿ.ರವಿ ಬಣ್ಣಿಸಿದರು.
ವಿಜಯನಗರ ಸಾಮ್ರಜ್ಯದ ಆಳ್ವಿಕೆ ಕರ್ನಾಟಕದ ಇತಿಹಾಸದಲ್ಲಿ ಸ್ವರ್ಣಯುಗವಾಗಿತ್ತು. ಅಂದಿನ ಪರಂಪರೆಯನ್ನು ಇಂದಿಗೂ ಸ್ಮರಿಸಲಾಗುತ್ತದೆ. ಇದರ ಹಿಂದೆ ಕುರುಬರ ಕೊಡುಗೆಯಿದೆ. ಬ್ರಿಟೀಷರ ವಿರುದ್ಧ ಹೋರಾಡಿದ ಹೋಳ್ಕರ್ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನ ತ್ಯಾಗಗಳು ಸದಾ ಅವಿಸ್ಮರಣೀಯ” ಎಂದರು.
“ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಪರಕೀಯರಿಂದ ಧಕ್ಕೆಯಾದಾಗ ತಮ್ಮ ಕುಲಗೋತ್ರ ಬಿಟ್ಟುಕೊಡದೆ ತಾವು ನೂರಾರು ವರ್ಷಗಳಿಂದ ನೆಲೆಸಿದ್ದ ನಾಡನ್ನು ತೊರೆದು ಬಂದ ಸ್ವಾಭಿಮಾನಿ ಕುರುಬ ಜನಾಂಗದವರು ಇಂದು ಭಾರತದ ಹಲವು ಕಡೆ ನೆಲೆಯೂರಿದ್ದಾರೆ. ತಮ್ಮದೇ ಬದುಕು ಕಟ್ಟಿಕೊಂಡು ಧರ್ಮದ ರಕ್ಷಣೆಯ ಕಾಯಕದಲ್ಲಿ ತೊಡಗಿದ್ದಾರೆ” ಎಂದು ಶ್ಲಾಘಿಸಿದರು.
“ಜನರಿಗೆ ಆಧ್ಯಾತ್ಮ ಬದುಕಿನ ದಾರಿ ತೋರಿದ ಶ್ರೀ ಗುರುರೇವಣ್ಣ ಸಿದ್ದೇಶ್ವರ, ಜಗದ್ಗುರು ಶಾಂತ ಮುತ್ತಯ್ಯ (ಶಾಂತಿಮಯ್ಯ)ಒಡೆಯರ್, ಮಹಾಕವಿ ಕಾಳಿದಾಸ, ದಾಸಶ್ರೇಷ್ಠ ಕನಕದಾಸ, ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ, ಮಹಾತ್ಮಾ ಬೊಮ್ಮಗೊಂಡೇಶ್ವರ, ವೀರಮಾತೆ ಅಹಲ್ಯಾಬಾಯಿ ಕುರುಬ ಜನಾಂಗದ ಪ್ರತಿನಿಧಿಗಳು” ಎಂದು ವೀರ ಪುರುಷರನ್ನು ರವಿ ನೆನಪಿಸಿದರು.
ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ಈಶ್ವರಾನಂದ ಸ್ವಾಮೀಜಿ, ಮಾಜಿ ಸಚಿವ ಹಾಗೂ ಶೆಫರ್ಡ್ಸ್ ಇಂಡಿಯಾ ಇಂಟರ್ನಾಷನಲ್ ಸಂಸ್ಥಾಪಕ, ಅಧ್ಯಕ್ಷ ಎ.ಎಚ್.ವಿಶ್ವನಾಥ್, ಸಂಸದ ಪದ್ಮಭೂಷಣ ವಿಕಾಸ್ ಮಹಾತ್ಮೆ, ಮಾಜಿ ಸಚಿವ ಎಚ್.ಎಂ.ರೇವಣ್ಣ, ವರ್ತೂರು ಸುರೇಶ್, ವೆಂಕಟೇಶ್ ಎಂ, ಮಧ್ಯಪ್ರದೇಶದ ರಾಕೇಶ್ ಯಾದವ್, ಹರಿಭಾಯ್, ಕೇಶವಮೂರ್ತಿ, ಜಯಪ್ಪ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.