ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ನೂತನ ಬಸ್ ಘಟಕವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Sri Ramalinga Reddy) ಅವರಿಂದ ಉದ್ಘಾಟಿಸಲಾಯಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಈ ಬಸ್ ಘಟಕ, ಬಸ್ ನಿಲ್ದಾಣ ಮತ್ತು ಹೊಸ ಬಸ್ಸುಗಳ ಸೇರ್ಪಡೆ ಮೂಲಕ ಸಮಗ್ರ ಸಾರಿಗೆ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಿದೆ.
5.27 ಕೋಟಿ ರುಪಾಯಿ ವೆಚ್ಚದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ನಿರ್ಮಿತವಾದ ಈ ಘಟಕದಲ್ಲಿ ಪ್ರಸ್ತುತ 15 ವಾಹನಗಳು ಕಾರ್ಯಾಚರಣೆಯಲ್ಲಿದ್ದು, 15 ವೇಗದೂತ ಅನುಸೂಚಿಗಳು ಸಂಚಲನಗೊಳ್ಳುತ್ತಿವೆ. ಘಟಕದ ವ್ಯಾಪ್ತಿಯಲ್ಲೇ ಒಂದು ಬಸ್ ನಿಲ್ದಾಣವನ್ನೂ ಕೂಡ ನಿರ್ಮಿಸಲಾಗಿದೆ.

ಇದೇ ವೇಳೆ, ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣವನ್ನು ಡಲ್ಟ್ ಅನುದಾನದೊಂದಿಗೆ ರೂ. 23.48 ಕೋಟಿಗೆ ಮೇಲ್ದರ್ಜೆಗೇರಿಸಲಾಗಿದ್ದು, ಬಾಗಲಕೋಟೆ ನವನಗರದಲ್ಲಿ ರೂ. 6.56 ಕೋಟಿ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ನೂತನ ಬಸ್ ಘಟಕ ನಿರ್ಮಿಸಲಾಗಿದೆ. ಶಿಗ್ಗಾವಿ ಪಟ್ಟಣದಲ್ಲಿಯೂ ರೂ. 8 ಕೋಟಿ ವೆಚ್ಚದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಹೊಸ ಬಸ್ ಘಟಕ ನಿರ್ಮಾಣ ಪೂರ್ಣಗೊಂಡಿದೆ.
ಸಂಸ್ಥೆಯಲ್ಲಿ ನೇಮಕಾತಿ ಕಾರ್ಯಾಚರಣೆ ಕೂಡ ವೇಗ ಪಡೆದುಕೊಂಡಿದ್ದು, 2,000 ಚಾಲನಾ ಸಿಬ್ಬಂದಿಗಳ ನೇಮಕಾತಿ ಪೂರ್ಣಗೊಳ್ಳಿ ಆದೇಶಗಳನ್ನು ವಿತರಿಸಲಾಗಿದೆ. ಮಾರ್ಚ್ 2024ರಿಂದ ಇಂದಿನವರೆಗೂ ಅನುಕಂಪದ ಆಧಾರದ ಮೇಲೆ 158 ಸಿಬ್ಬಂದಿಗಳಿಗೆ ನೇಮಕಾತಿ ನೀಡಲಾಗಿದೆ. ದರ್ಜೆ-2 ಅಧಿಕಾರಿಗಳ 33 ನೇರ ನೇಮಕಾತಿ ಹುದ್ದೆಗಳ ಜೊತೆಗೆ ಆಂತರಿಕ ನೇಮಕಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.
ಚನ್ನಮ್ಮನ ಕಿತ್ತೂರು ಬಸ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್ (Babasaheb Patil), ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವಿನಯ ಬಾ. ನಾವಲಗಟ್ಟಿ (Vinay B. Navalgatti), ವಾ.ಕ.ರ.ಸಾ. ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಹನಮಣ್ಣವರ (Sunil Hanamannavar), ವಾ.ಕ.ರ.ಸಾ. ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಙಾ ಎಂ. (Priyanga M., IAS) ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






















































