ಹುಬ್ಬಳ್ಳಿ: ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಸರಕಾರಿ-ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳುಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸರಕಾರ ಯಾವುದೇ ಕಾರಣಕ್ಕೂ ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿರುವ ಅವರು, ಹುಬ್ಬಳ್ಳಿಯಲ್ಲಿಂದು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಯಾರೋ ಕಿಡಿಗೇಡಿಗಳು ನಕಲಿ ಸುತ್ತೋಲೆಯನ್ನು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಅದು ವೈರಲ್ ಆಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೀವ್ರ ಗೊಂದಲವಾಗಿದೆ. ಅದೂ ಸರಕಾರದ ಹೆಸರಿನಲ್ಲಿ ನಕಲಿ ಸುತ್ತೋಲೆ ಸೃಷ್ಟಿಸುವುದು ದೊಡ್ಡ ಅಪರಾಧ. ಹೀಗಾಗಿ ಸೈಬರ್ ಪೋಲೀಸರಿಗೆ ತಕ್ಷಣ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಸೂಚಿಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
ಮಕ್ಕಳ ಭವಿಷ್ಯದ ಜತೆ ಯಾರೂ ಚೆಲ್ಲಾಟ ಆಡಬಾರದು. ಮೊದಲೇ ಕೋವಿಡ್ ಕಾರಣಕ್ಕೆ ಎಲ್ಲರಿಗೂ ಆತಂಕ ಇದೆ. ಶೈಕ್ಷಣಿಕ ವ್ಯವಸ್ಥೆ ಹಳಿ ತಪ್ಪದಂತೆ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದರೂ ಕೆಲವರು ಇಂಥ ಕೃತ್ಯ ಎಸಗಿದ್ದಾರೆ. ಅಂಥವರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಉಪ ಮುಖ್ಯಮಂತ್ರಿ ಎಚ್ಚರಿಸಿದರು.