ದಾವಣಗೆರೆ: ಎಲ್ಲಾ ಯೋಜನೆಗಳ ಮುಂಚೂಣಿ ಕಾರ್ಯಕರ್ತರಿಗೆ ಸೇವಾ ಖಾಯಮಾತಿ, ಕನಿಷ್ಟ ವೇತನ ಮತ್ತು ಪಿಂಚಣಿ ಹಾಗೂ ಕೊರೋನಾ ಸಮಯದಲ್ಲಿ ಸುರಕ್ಷಾ ಸಾಮಾಗ್ರಿಗಳು, ಕೋವಿಡ್-19 ಅಪಾಯ ಭತ್ಯೆ ಮತ್ತು ಮರಣ ಪರಿಹಾರಕ್ಕಾಗಿ ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಭಾರತ್ ಬಂದ್‌ಗೆ ಬೆಂಬಲಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸ್ಕೀಂ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಡಬ್ಯೂಎಫ್‌ಐ) ಅಖಿಲ ಭಾರತ ಸಮಿತಿ ಕರೆಯ ಮೇರೆಗೆ ಪ್ರತಿಭಟನೆ ನಡೆಸಿ, ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ ಸೇವೆಗೆ ನೇಮಿಸಲ್ಪಟ್ಟಿರುವ ಎಲ್ಲಾ ಯೋಜನೆಗಳ ಕಾರ್ಯಕರ್ತರಿಗೆ ಫ್ರಂಟ್‌ಲೈನ್ ನೌಕರರೆಂದು ಘೋಷಿಸಿ. ಕೂಡಲೇ ಉಚಿತ ಲಸಿಕೆ ಅಭಿಯಾನ ಕೈಗೊಳ್ಳಬೇಕು, ಮಹಾಮಾರಿ ನಿರ್ವಹಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಸುರಕ್ಷಾ ಸಾಧನ, ಸಲಕರಣೆ ಇತ್ಯಾದಿಗನ್ನು ಖಾತ್ರಿಪಡಿಸಿ. ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಿರಿ. ಸ್ಕೀಂ ವರ್ಕರ್‌ಗಳನ್ನು ಕಾರ್ಮಿಕರೆಂದು ಪರಿಗಣಿಸಿ. ಎಲ್ಲಾ ಸ್ಕೀಂ ವರ್ಕರ್‌ಗಳಿಗೂ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು ಅಂಗನವಾಡಿ ನೌಕರರ ವಿಮಾ ಯೋಜನೆಯನ್ನು ಸರಿಯಾಗಿ ಜಾರಿಗೆ ತಂದು, ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೂ ಅದರ ಪ್ರಯೋಜನ ಸಿಗುವಂತಾಗಬೇಕು. ಬಿಸಿಯೂಟ ಕಾರ್ಮಿಕರಿಗೆ ಬೇಸಿಗೆ ರಜೆಯೂ ಸೇರಿದಂತೆ ಶಾಲೆ ಮುಚ್ಚಿದ ಅವಧಿಯಲ್ಲೂ ಸಹ ಕನಿಷ್ಟ ವೇತನ ಪಾವತಿಸಬೇಕು. ಅಡಿಗೆ ಗುತ್ತಿಗೆ ಹಾಗೂ ಕೇಂದ್ರೀಕೃತ ಅಡುಗೆ ವ್ಯವಸ್ಥೆಗೆ ಅವಕಾಶ ಕೊಡಬಾರದು.
ಶೇ.6 ರಷ್ಟು ಜಿಡಿಪಿಯನ್ನು ಆರೋಗ್ಯ ಕ್ಷೇತ್ರಕ್ಕೆ ಒದಗಿಸಿ, ಸಮರ್ಪಕ ಪ್ರಮಾಣದ ಬೆಡ್‌ಗಳು, ಆಮ್ಲಜನಕ ಮತ್ತಿತರ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಆರೋಗ್ಯ ಕ್ಷೇತ್ರ ಮತ್ತು ಆರೋಗ್ಯ ಸಂಪನ್ಮೂಲಗಳನ್ನು ಬಲಪಡಿಸಿ. ಸಮರ್ಪಕ ಪ್ರಮಾಣದ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಖಾತ್ರಿಪಡಿಸಬೇಕು.
ಸೇವಾವಧಿಯಲ್ಲಿ ಮೃತಪಟ್ಟ ಎಲ್ಲಾ ಫ್ರಂಟ್‌ಲೈನ್ ನೌಕರರಿಗೆ 50 ಲಕ್ಷ ರೂಪಾಯಿಗಳ ವಿಮಾ ಸುರಕ್ಷೆ ಒದಗಿಸಬೇಕು. ಕೋವಿಡ್ ಸೋಂಕಿತ ಫ್ರಂಟ್‌ಲೈನ್ ನೌಕರರು ಹಾಗೂ ಅವರ ಕುಟುಂಬಸ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳಿಗೆ ಪ್ರತಿಭಟನಾಕಾರರ ಹಕ್ಕೊತ್ತಾಯ ಮಂಡಿಸಿದರು.
ಪ್ರತಿಭಟನೆಯಲ್ಲಿ ತಿಪ್ಪೇಸ್ವಾಮಿ ಅಣಬೇರು, ಭಾರತಿ, ನಾಗವೇಣಿ ಹಿರೇಮಳಲಿ, ಮಧು ತೊಗಲೇರಿ, ಮಂಜುಳಾ, ನಿರ್ಮಲ, ಶಾಂತ, ಫರ್‌ವೀನ್ ಬಾನು, ಭಾರತಿ, ಪುಷ್ಪ, ಆಶಾ, ವಿಜಯಲಕ್ಷ್ಮೀ, ಚಂದ್ರಮ್ಮ, ಅನಿತಾ, ತಿಪ್ಪಕ್ಕ ಇನ್ನಿತರರು ಪಾಲ್ಗೊಂಡಿದ್ದರು.