ನವದೆಹಲಿ: ಮಣ್ಣಿನ ಆರೋಗ್ಯ, ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ನಡೆಸುತ್ತಿರುವ ರಾಷ್ಟ್ರವ್ಯಾಪಿ ‘ಖೇತ್ ಬಚಾವೋ ಅಭಿಯಾನ’ ದೇಶಾದ್ಯಂತ ಗಮನಾರ್ಹ ಪ್ರತಿಕ್ರಿಯೆ ಪಡೆದುಕೊಂಡಿದೆ.
ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಐಸಿಎಆರ್ ಮಾಹಿತಿ ಪ್ರಕಾರ, ವಿವಿಧ ಜಾಗೃತಿ ಮತ್ತು ಸಂಪರ್ಕ ಕಾರ್ಯಕ್ರಮಗಳ ಮೂಲಕ ಈ ಅಭಿಯಾನವು ಇದುವರೆಗೆ ಸುಮಾರು 2.71 ಕೋಟಿ ಜನರನ್ನು ತಲುಪಿದೆ.
ಅಭಿಯಾನದ ಭಾಗವಾಗಿ ದೇಶದ ವಿವಿಧ ಭಾಗಗಳಲ್ಲಿ 12,979 ಜಾಗೃತಿ ಶಿಬಿರಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದ್ದು, ಸುಮಾರು 7.17 ಲಕ್ಷ ರೈತರು ನೇರವಾಗಿ ಭಾಗವಹಿಸಿದ್ದಾರೆ. ಜೊತೆಗೆ 1.11 ಲಕ್ಷಕ್ಕೂ ಹೆಚ್ಚು ಜನರ ಪಾಲ್ಗೊಳ್ಳುವಿಕೆಯಿಂದ 3,145 ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಸುಸ್ಥಿರ ಕೃಷಿ ಪದ್ಧತಿಗಳ ಪ್ರಾಯೋಗಿಕ ಅಳವಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಸಿರು ಗೊಬ್ಬರ, ಜೈವಿಕ ಗೊಬ್ಬರ ಮತ್ತು ಸಾವಯವ ಪೋಷಕಾಂಶಗಳ ಕುರಿತು 7,928 ಕ್ಷೇತ್ರ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ತಳಮಟ್ಟದ ಭಾಗವಹಿಸುವಿಕೆಗೆ ಒತ್ತು ನೀಡಿರುವ ಐಸಿಎಆರ್, ಪಂಚಾಯತ್ ಪ್ರತಿನಿಧಿಗಳು, ಸರಪಂಚರು ಹಾಗೂ ಜಿಲ್ಲಾ ಪರಿಷತ್ ಸದಸ್ಯರ ಭಾಗವಹಿಸುವಿಕೆಯಿಂದ 4,916 ಜನಪ್ರತಿನಿಧಿ ಸಮ್ಮೇಳನಗಳನ್ನು ನಡೆಸಿದೆ.
ರಸಗೊಬ್ಬರ ಮತ್ತು ಕೃಷಿ ಇನ್ಪುಟ್ ವಿತರಕರ ಪಾತ್ರವನ್ನು ಗಮನದಲ್ಲಿಟ್ಟುಕೊಂಡು, ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶ ನಿರ್ವಹಣೆ ಕುರಿತು 9,609 ಸಂವಾದ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ.
ರೈತ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು ಮತ್ತು ರೈತ ಹಿತಾಸಕ್ತಿ ಗುಂಪುಗಳ ಸಹಭಾಗಿತ್ವದ ಮೂಲಕ 8,300ಕ್ಕೂ ಹೆಚ್ಚು ರೈತ ಸದಸ್ಯರನ್ನು ಸಂಪರ್ಕಿಸಲಾಗಿದೆ.
ವ್ಯಾಪಕ ಜಾಗೃತಿಗಾಗಿ ದೇಶಾದ್ಯಂತ 53 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಬ್ಯಾನರ್, ಪೋಸ್ಟರ್ ಮತ್ತು ಹೋರ್ಡಿಂಗ್‌ಗಳನ್ನು ಪ್ರದರ್ಶಿಸಲಾಗಿದ್ದು, ರೇಡಿಯೋ, ದೂರದರ್ಶನ ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ 1,144 ಮಾಧ್ಯಮ ಪ್ರಸಾರಗಳನ್ನೂ ನಡೆಸಲಾಗಿದೆ.
ರಾಸಾಯನಿಕ ಗೊಬ್ಬರಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಿ, ದೀರ್ಘಕಾಲೀನ ಕೃಷಿ ಸುಸ್ಥಿರತೆಯನ್ನು ಉತ್ತೇಜಿಸುವುದು ‘ಖೇತ್ ಬಚಾವೋ ಅಭಿಯಾನ’ದ ಪ್ರಮುಖ ಉದ್ದೇಶವಾಗಿದೆ.




























































