ನವದೆಹಲಿ: ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಹೆಚ್ಚು ಎಚ್ಚರಿಕೆಯಿಂದಿದ್ದು, ಯಾವುದೇ ಅನುಮಾನಾಸ್ಪದ ಅಥವಾ ಸಮಾಜ ವಿರೋಧಿ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ರೈಲ್ವೆ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ರೈಲ್ವೆ ಸಚಿವಾಲಯ ಮನವಿ ಮಾಡಿದೆ.
ರೈಲ್ವೆ ಆಸ್ತಿ ಮತ್ತು ಸೇವೆಗಳನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ಕೆಲವು ಘಟನೆಗಳ ಹಿನ್ನೆಲೆ ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಬಳಿಕ ಈ ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಮತ್ತು ರವನೀತ್ ಸಿಂಗ್ ಬಿಟ್ಟು, ರೈಲ್ವೆ ಮಂಡಳಿಯ ಅಧ್ಯಕ್ಷರು ಹಾಗೂ ವಿವಿಧ ವಲಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪರಿಶೀಲನಾ ಸಭೆಯಲ್ಲಿ ಬೆಂಕಿ ಅವಘಡಗಳು ಸೇರಿದಂತೆ ಇತ್ತೀಚಿನ ಕೆಲವು ಘಟನೆಗಳ ಪ್ರಾಥಮಿಕ ತನಿಖೆಯಲ್ಲಿ ಸಮಾಜ ವಿರೋಧಿ ಶಕ್ತಿಗಳ ಕೈವಾಡ ಇರುವ ಸಾಧ್ಯತೆ ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಪ್ರಕರಣಗಳ ಕುರಿತು ರೈಲ್ವೆ ರಕ್ಷಣಾ ಪಡೆ (RPF) ತನಿಖೆ ಮುಂದುವರಿಸಿದೆ.
ಕೆಲವು ಸಂದರ್ಭಗಳಲ್ಲಿ ರೈಲ್ವೆ ಸಿಬ್ಬಂದಿಯ ತ್ವರಿತ ಕ್ರಮದಿಂದ ದೊಡ್ಡ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ರೈಲ್ವೆ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಕೃತಕ ಬುದ್ಧಿಮತ್ತೆ (AI), ಡ್ರೋನ್‌ಗಳು ಹಾಗೂ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಜೊತೆಗೆ ರೈಲ್ವೆ ರಕ್ಷಣಾ ಪಡೆ ಮೂಲಕ ಗುಪ್ತಚರ ಮಾಹಿತಿ ಸಂಗ್ರಹಣಾ ವ್ಯವಸ್ಥೆಯನ್ನು ಮಿಷನ್ ಮೋಡ್‌ನಲ್ಲಿ ಬಲಪಡಿಸಲಾಗುತ್ತಿದೆ.
ರೈಲ್ವೆ ಮಂಡಳಿ ಮತ್ತು ವಲಯ ಕಚೇರಿಗಳ ನಡುವಿನ ಸಮನ್ವಯ ಹೆಚ್ಚಿಸುವುದು, ಸಿಸಿಟಿವಿ ವ್ಯಾಪ್ತಿ ವಿಸ್ತರಣೆ, ಸೈಬರ್ ಭದ್ರತೆ ಬಲಪಡಿಸುವುದು ಹಾಗೂ AI ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಜಾರಿಗೆ ತರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ರೈಲ್ವೆ ರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರ ನಡುವೆ ಸಮರ್ಪಕ ಮಾಹಿತಿ ಹಂಚಿಕೆ ಅಗತ್ಯವಿದೆ ಎಂದು ಸಭೆ ಒತ್ತಿ ಹೇಳಿತು.
ದೇಶದಾದ್ಯಂತ ರೈಲುಗಳು, ಪ್ರಯಾಣಿಕರು, ನಿಲ್ದಾಣಗಳು ಹಾಗೂ ರೈಲ್ವೆ ಮೂಲಸೌಕರ್ಯಗಳ ಸುರಕ್ಷತೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ




























































