ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ 21 ದಿನಗಳ ‘ಕಾರ್ಯಕರ್ತ ವಿಕಾಸ ವರ್ಗ ಪ್ರಥಮ (ಸಾಮಾನ್ಯ)’ ಶಿಬಿರದ ಸಮಾರೋಪ ಸಮಾರಂಭವು ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಬಿ.ಎಸ್. ರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್ ಸಮಾರೋಪ ಭಾಷಣ ಮಾಡಿದರು. ಶಿಬಿರದ ವರ್ಗಾಧಿಕಾರಿ ಗಿರೀಶ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಕಾರ್ಯಕರ್ತ ವಿಕಾಸ ವರ್ಗ ಪ್ರಥಮ’ವು ಸಂಘದ ಕಾರ್ಯಕರ್ತರಿಗೆ ನೀಡಲಾಗುವ ಮೂಲಭೂತ ಹಾಗೂ ಪ್ರಮುಖ ತರಬೇತಿ ಶಿಬಿರವಾಗಿದೆ. ಸ್ವಯಂಸೇವಕರಲ್ಲಿ ಶಿಸ್ತು, ದೈಹಿಕ ಸಾಮರ್ಥ್ಯ, ಬೌದ್ಧಿಕ ಜಾಗೃತಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಈ ತರಬೇತಿ ನಡೆಸಲಾಗುತ್ತದೆ.
ಸಾಮಾನ್ಯವಾಗಿ 21 ದಿನಗಳ ಕಾಲ ನಡೆಯುವ ಈ ವಸತಿ ಶಿಬಿರದಲ್ಲಿ ದೈಹಿಕ ವ್ಯಾಯಾಮ, ಯೋಗ, ದಂಡ ತರಬೇತಿ, ಘೋಷ್ ಅಭ್ಯಾಸ ಹಾಗೂ ಸೈದ್ಧಾಂತಿಕ ಮತ್ತು ಬೌದ್ಧಿಕ ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ.
ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ಪೂರ್ಣಗೊಳಿಸಿರುವ ಮತ್ತು ನಿಗದಿತ ವಯೋಮಿತಿಯ ಅರ್ಹತೆ ಹೊಂದಿರುವ ಕಾರ್ಯಕರ್ತರಿಗೆ ಈ ತರಬೇತಿ ನೀಡಲಾಗುತ್ತದೆ. ಪ್ರಥಮ ವರ್ಗದ ನಂತರ ದ್ವಿತೀಯ ಹಾಗೂ ತೃತೀಯ ವಿಕಾಸ ವರ್ಗಗಳ ತರಬೇತಿಗಳೂ ನಡೆಯುತ್ತವೆ.




























































