ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ 2026ರ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ರುಕ್ಮಿಣಿ ಮಲ್ಲಿಕ್, ಅಂದರೆ ಕಿರುತೆರೆ ನಟಿ ಕೋಯಲ್ ಮಲ್ಲಿಕ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಕಿರುತೆರೆ ಮೂಲಕ ಕೋಯಲ್ ಮಲ್ಲಿಕ್ ಎಂದೇ ಜನಪ್ರಿಯರಾಗಿರುವ ರುಕ್ಮಿಣಿ ಮಲ್ಲಿಕ್ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ವರ್ಷದ ಮಾರ್ಚ್ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು ಜುಲೈನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ.

ಅಕ್ಟೋಬರ್ 16ರಂದು ಉಪಚುನಾವಣೆ ನಡೆಯಲಿದೆ. ಅದೇ ದಿನ 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯೂ ನಡೆಯಲಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲಿನ ಬಳಿಕ ಪಕ್ಷದ ಹಲವು ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡಿದ್ದರು. ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬಾರೈಕ್ ಅವರು ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಅಭ್ಯರ್ಥಿಗಳಾಗಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ಕೋಯಲ್ ಮಲ್ಲಿಕ್ ಅವರಿಗೂ ಬಿಜೆಪಿ ರಾಜ್ಯಸಭಾ ಚುನಾವಣೆಗೆ ಟಿಕೆಟ್ ಘೋಷಿಸಿದೆ.















































































