ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಪ್ರಮುಖ ಟೆಕ್ ಕಂಪನಿಗಳ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ವೇಗದ ಬೆಳವಣಿಗೆ, ಸುರಕ್ಷತೆ ಹಾಗೂ ನಿಯಂತ್ರಣ ಕುರಿತು ಚರ್ಚಿಸಿದ್ದಾರೆ.
ಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಆಂಥ್ರಾಪಿಕ್ ಸಿಇಒ ಡೇರಿಯೊ ಅಮೋಡೆ ಸೇರಿದಂತೆ ಟೆಕ್ ಕ್ಷೇತ್ರದ ಹಲವು ಪ್ರಮುಖರು ಭಾಗವಹಿಸಿದ್ದರು.
ಸಭೆಗೂ ಮುನ್ನ ವೆಸ್ಟ್ ವಿಂಗ್ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಸುಂದರ್ ಪಿಚೈ ಅವರನ್ನು ಪರಿಚಯಿಸುವ ವೇಳೆ ಅವರನ್ನು ‘ಮಾನ್‌ಸ್ಟರ್’ ಎಂದು ಕರೆದರು. “ಈ ವ್ಯಕ್ತಿ ಒಬ್ಬ ದೈತ್ಯ ಶಕ್ತಿ. ಆದರೆ ಇದು ಯಾರಿಗೂ ಅಷ್ಟಾಗಿ ತಿಳಿದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
ಪಿಚೈ ಅವರ ಟೆಕ್ ಕ್ಷೇತ್ರದ ಪ್ರಭಾವ, ಸಾಮರ್ಥ್ಯ ಮತ್ತು ಸಾಧನೆಯನ್ನು ಮೆಚ್ಚಿ ಟ್ರಂಪ್ ಈ ಪದವನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.

AI ಅಭಿವೃದ್ಧಿಗೆ ಕಟ್ಟುನಿಟ್ಟಿನ ನಿಯಮ
ಸಭೆಯಲ್ಲಿ ಮುಂದುವರಿದ AI ಮಾದರಿಗಳ ಅಭಿವೃದ್ಧಿ ಹಾಗೂ ಸುರಕ್ಷತೆ ಕುರಿತು ಹಲವು ವಿಚಾರಗಳು ಚರ್ಚೆಯಾಗಿವೆ. ಕಂಪನಿಗಳ ಹಣಕಾಸು ಲೆಕ್ಕಪರಿಶೋಧನೆ ಮತ್ತು ಆಡಳಿತದಲ್ಲಿ ಇರುವ ನಿಯಂತ್ರಣ ವ್ಯವಸ್ಥೆಗಳ ಮಾದರಿಯಲ್ಲೇ AI ಅಭಿವೃದ್ಧಿಗೂ ಕಠಿಣ ಮಾನದಂಡಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಪಿಚೈ ಹೇಳಿದ್ದಾರೆ.
ಮುಂದುವರಿದ AI ಮಾದರಿಗಳನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಮುನ್ನ ಆಂತರಿಕ ಅಪಾಯ ಪರಿಶೀಲನೆ, ಮೂರನೇ ವ್ಯಕ್ತಿಯ ಬಾಹ್ಯ ಆಡಿಟ್ ಹಾಗೂ ಕಂಪನಿಯ ಆಡಳಿತ ಮಂಡಳಿಯ ಸ್ವತಂತ್ರ ಪರಿಶೀಲನೆ ನಡೆಸುವ ಕುರಿತು ಚರ್ಚೆ ನಡೆದಿದೆ.
ಸ್ವಯಂ ನಿಯಂತ್ರಣಕ್ಕೆ ಒತ್ತು
AI ಕ್ಷೇತ್ರದಲ್ಲಿ ಕಂಪನಿಗಳು ಸ್ವಯಂಪ್ರೇರಿತವಾಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಟ್ರಂಪ್ ಶ್ಲಾಘಿಸಿದ್ದಾರೆ. AI ತಂತ್ರಜ್ಞಾನದ ವೇಗದ ಅಭಿವೃದ್ಧಿಯ ಜತೆಗೆ ಅದರ ಸುರಕ್ಷತೆ ಮತ್ತು ಜವಾಬ್ದಾರಿಯುತ ಬಳಕೆಗೆ ಒತ್ತು ನೀಡುವ ಅಗತ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.









































































