ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪರ ವಕೀಲರು ಇದೀಗ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಆರೋಪಿ ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಒಂದು ವಾರ ಮುಂದೂಡುವಂತೆ ಕೋರಲಾಗಿದೆ.
ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು 59ನೇ ಸಿಸಿಹೆಚ್ ನ್ಯಾಯಾಲಯ ಈಗಾಗಲೇ ಅನುಮತಿ ನೀಡಿದ್ದು, ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ಸೆಪ್ಟೆಂಬರ್ 28ರಂದು ದಿನಾಂಕ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಮಾಫಿ ಸಾಕ್ಷಿಯಾಗಲು ಅನುಮತಿ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ದರ್ಶನ್ ಪರ ವಕೀಲರು ಮುಂದಾಗಿದ್ದಾರೆ. ಇದಕ್ಕಾಗಿ ಮೇಲ್ಮನವಿ ಸಲ್ಲಿಸಲು ಅಗತ್ಯ ಸಮಯ ನೀಡಬೇಕು. ಹೀಗಾಗಿ ಸೆಪ್ಟೆಂಬರ್ 28ರಂದು ನಡೆಯಲಿರುವ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಒಂದು ವಾರ ಮುಂದೂಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದಕ್ಕೂ ಮುನ್ನ ಮಾಫಿ ಸಾಕ್ಷಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ದರ್ಶನ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಾಫಿ ಸಾಕ್ಷಿಯಾಗಲು ನೀಡಿರುವ ಅನುಮತಿಯನ್ನು ಈ ಹಂತದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ ಎಂದು ಹೇಳಿತ್ತು.
ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ಅಥವಾ ಕಾನೂನುಬಾಹಿರ ಕ್ರಮ ಕಂಡುಬಂದರೆ, ಅದನ್ನು ಪ್ರಶ್ನಿಸಲು ಅವಕಾಶವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಇದೀಗ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಸೆ.28ರಂದು ಪ್ರದೋಷ್ ರಾವ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗಬೇಕಿರುವ ಹಿನ್ನೆಲೆಯಲ್ಲಿ, ಅದನ್ನು ಮುಂದೂಡಿಸುವಂತೆ ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿ ಇದೀಗ ನ್ಯಾಯಾಲಯದ ಮುಂದಿದೆ.






































































