ನವದೆಹಲಿ: ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಹಾಗೂ ಗ್ರಾಮೀಣ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟವನ್ನು ನಿವಾರಿಸಲು ₹3,705.30 ಕೋಟಿ ಕೇಂದ್ರ ಪರಿಹಾರವನ್ನು ತುರ್ತಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಅಕ್ಟೋಬರ್ 1ರಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ, ಕರ್ನಾಟಕವು ಕಳೆದ 150 ವರ್ಷಗಳಲ್ಲೇ ಅತ್ಯಂತ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಖರ್ಗೆ ತಿಳಿಸಿದ್ದಾರೆ. 2023ರಲ್ಲಿಯೂ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಕೇವಲ ಮೂರು ವರ್ಷಗಳ ಅಂತರದಲ್ಲಿ ಮತ್ತೊಮ್ಮೆ ಇಂತಹ ಪರಿಸ್ಥಿತಿ ಉಂಟಾಗಿರುವುದು ರೈತರು ಮತ್ತು ರಾಜ್ಯದ ಆರ್ಥಿಕತೆಗೆ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.
ಪತ್ರದ ಪ್ರಕಾರ, ಸೆಪ್ಟೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಶೇ.58ರಷ್ಟು ಮಳೆ ಕೊರತೆ ದಾಖಲಾಗಿದ್ದು, ಎಲ್ಲ 31 ಜಿಲ್ಲೆಗಳೂ ಮುಂಗಾರು ಮಳೆಯ ಅಭಾವದಿಂದ ಬಾಧಿತವಾಗಿವೆ. ರಾಜ್ಯದ 240 ತಾಲೂಕುಗಳ ಪೈಕಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನೂ 116 ತಾಲೂಕುಗಳಲ್ಲಿ ಪರಿಶೀಲನೆ ನಡೆಯುತ್ತಿತ್ತು ಎಂದು ಖರ್ಗೆ ಉಲ್ಲೇಖಿಸಿದ್ದಾರೆ.
ಸುಮಾರು 19.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಕೃಷಿ ವಲಯದಲ್ಲಿ ₹18,748.23 ಕೋಟಿ ನಷ್ಟ ಸಂಭವಿಸಿದೆ ಎಂದು ರಾಜ್ಯ ಅಂದಾಜಿಸಿದೆ. ಬರದ ಪರಿಣಾಮ ಒಟ್ಟಾರೆ ಆರ್ಥಿಕತೆಯ ಮೇಲೆ ಸುಮಾರು ₹40,000 ಕೋಟಿ ಹೊರೆ ಉಂಟಾಗುವ ಸಾಧ್ಯತೆಯಿದೆ. 31 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಜೀವನೋಪಾಯದ ಸಂಕಷ್ಟ ಎದುರಿಸುತ್ತಿದ್ದು, 709 ಹಳ್ಳಿಗಳು ಮತ್ತು 114 ನಗರ ವಾರ್ಡ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜೂನ್ 1ರಿಂದ ಆಗಸ್ಟ್ 31ರವರೆಗೆ ವಾಡಿಕೆಯ 691 ಮಿ.ಮೀ. ಮಳೆಯ ಬದಲಿಗೆ 477 ಮಿ.ಮೀ. ಮಳೆಯಾಗಿದ್ದು, ಶೇ.31ರಷ್ಟು ಕೊರತೆ ದಾಖಲಾಗಿದೆ. ಜಲಾಶಯಗಳ ನೀರಿನ ಮಟ್ಟ ಕುಸಿತ, ಬಿತ್ತನೆ ಪ್ರಮಾಣದಲ್ಲಿನ ಇಳಿಕೆ ಹಾಗೂ ಜಲವಿದ್ಯುತ್ ಉತ್ಪಾದನೆಯ ಮೇಲಿನ ಸಂಭಾವ್ಯ ಪರಿಣಾಮಗಳ ಬಗ್ಗೆಯೂ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ಪರಿಹಾರ ಬೇಡಿಕೆ
ವಿಪತ್ತು ಪರಿಹಾರ ನಿಯಮಗಳಡಿ ರಾಜ್ಯ ಕೋರಿರುವ ₹3,705.30 ಕೋಟಿ ನೆರವನ್ನು ಯಾವುದೇ ಅನಗತ್ಯ ಕಡಿತವಿಲ್ಲದೆ ಬಿಡುಗಡೆ ಮಾಡುವಂತೆ ಖರ್ಗೆ ಮನವಿ ಮಾಡಿದ್ದಾರೆ. ಈ ಮೊತ್ತದಲ್ಲಿ ಬೆಳೆ ಉತ್ಪಾದನಾ ವೆಚ್ಚದ ಸಹಾಯಧನಕ್ಕೆ ₹2,017.26 ಕೋಟಿ, ಪಶುಸಂಗೋಪನೆಗೆ ₹583.04 ಕೋಟಿ, ಕುಡಿಯುವ ನೀರು ಪೂರೈಕೆಗೆ ₹805 ಕೋಟಿ ಹಾಗೂ ಸಂತ್ರಸ್ತ ರೈತರಿಗೆ ಪರಿಹಾರವಾಗಿ ₹300 ಕೋಟಿ ಸೇರಿವೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬರದ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಅಲ್ಲಿನ ಹಾನಿಯನ್ನು ಪರಿಶೀಲಿಸಲು ಹೆಚ್ಚುವರಿ ಅಂತರ-ಸಚಿವಾಲಯ ಕೇಂದ್ರ ತಂಡವನ್ನು ನಿಯೋಜಿಸುವಂತೆಯೂ ಅವರು ಕೋರಿದ್ದಾರೆ. ಅಕ್ಟೋಬರ್ 3ರಿಂದ 7ರವರೆಗೆ ರಾಜ್ಯದ ಇತರ ಭಾಗಗಳಿಗೆ ಮೂರು ಕೇಂದ್ರ ತಂಡಗಳು ಭೇಟಿ ನೀಡಲಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರೈತರ ಅರ್ಹತೆ ಪರಿಶೀಲನೆಗೆ ನವೀಕೃತ ದಾಖಲೆ ಬಳಕೆಗೆ ಒತ್ತಾಯ
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉತ್ಪಾದನಾ ವೆಚ್ಚದ ಸಹಾಯಧನ ಲೆಕ್ಕಾಚಾರ ಮಾಡುವಾಗ 2015-16ರ ಕೃಷಿ ಗಣತಿಯ ಬದಲಿಗೆ ಕರ್ನಾಟಕದ ‘ಭೂಮಿ’ ಭೂದಾಖಲೆಗಳ ದತ್ತಾಂಶವನ್ನು ಬಳಸುವಂತೆ ಖರ್ಗೆ ಆಗ್ರಹಿಸಿದ್ದಾರೆ. ಹಳೆಯ ದತ್ತಾಂಶದ ಬಳಕೆಯಿಂದ ಅರ್ಹ ರೈತರು ಪರಿಹಾರದಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ದಾಖಲೆಗಳ ಪ್ರಕಾರ, 45.7 ಲಕ್ಷ ರೈತರು ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ಮಟ್ಟದ ಪರಿಶೀಲನೆಗೆ ಒಳಪಟ್ಟಿರುವ ಹೆಚ್ಚುವರಿ ತಾಲೂಕುಗಳನ್ನು ಪ್ರತ್ಯೇಕವಾಗಿ ಮರುಮರು ಮನವಿ ಸಲ್ಲಿಸುವ ಬದಲು, ನಿರಂತರ ಬರ ಮೌಲ್ಯಮಾಪನ ಪ್ರಕ್ರಿಯೆಯಲ್ಲೇ ಸೇರಿಸಿಕೊಳ್ಳುವಂತೆಯೂ ಅವರು ಕೋರಿದ್ದಾರೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಭದ್ರತೆ ಹಾಗೂ ಪರ್ಯಾಯ ವಿದ್ಯುತ್ ಖರೀದಿಯ ವೆಚ್ಚಕ್ಕೆ ಹೆಚ್ಚುವರಿ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.
ಕುಡಿಯುವ ನೀರು, ಮೇವಿನ ಪೂರೈಕೆ, ಉದ್ಯೋಗ ಸೃಷ್ಟಿ ಮತ್ತು ಬೆಳೆ ವಿಮೆ ಸೇರಿದಂತೆ ಬರ ಪರಿಹಾರ ಕ್ರಮಗಳಿಗಾಗಿ ರಾಜ್ಯ ಸರ್ಕಾರ ಈಗಾಗಲೇ ಗಣನೀಯ ಅನುದಾನ ಮೀಸಲಿಟ್ಟಿದೆ ಎಂದು ಖರ್ಗೆ ತಿಳಿಸಿದ್ದಾರೆ. ಬರ ಪರಿಹಾರವನ್ನು ಮಾನವೀಯ ನೆಲೆಯಲ್ಲಿ ಆದ್ಯತೆಯ ವಿಷಯವಾಗಿ ಪರಿಗಣಿಸಿ, ರಾಜ್ಯದ ಮನವಿಯನ್ನು ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಿ ವಿಳಂಬವಿಲ್ಲದೆ ನೆರವು ಬಿಡುಗಡೆ ಮಾಡುವಂತೆ ಅವರು ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ.














































































