ಆರ್ಥಿಕ ಸಂಕಷ್ಟದಿಂದ ನಲುಗಿದ ಸಾರಿಗೆ ಸಂಸ್ಥೆಯ ನೌಕರರು.. ಹಲವರಿಗೆ ಹಲವು ರೀತಿಯ ಸವಾಲುಗಳು.. ಸಮಸ್ಯೆಯ ಸುಳಿಯಲ್ಲಿ ಹಲವರು.. ಸರ್ಕಾರದ ನಿರ್ಲಕ್ಷ್ಯದ ನಡೆ ಬಗ್ಗೆ ಹಲವರ ಬೇಸರ..
ಬಾಗಲಕೋಟೆ: ಆರ್ಥಿಕ ಸಂಕಷ್ಟದಿಂದ ನಲುಗಿದ ಸಾರಿಗೆ ಸಂಸ್ಥೆಯ ನೌಕರರೊಬ್ಬರು ಬಾಗಲಕೋಟೆಯಲ್ಲಿ ಸಾವಿಗೆ ಶರಣಾಗಿದ್ದಾರೆ. ನಿಗದಿತ ಸಮಯಕ್ಕೆ ವೇತನ ಬಾರದಿದ್ದುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೆಎಸ್ಸಾರ್ಟಿಸಿ ಚಾಲಕ ಭರಮಪ್ಪ ಗೊಂದಿ ಎಂಬವರು ಸಾವಿಗೆ ಶರಣಾಗಿದ್ದಾರೆಂದು ಅವರ ಆಪ್ತರು ಅಳಲು ತೋಡಿಕೊಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಕೆರೂರು ಪಟ್ಟಣದ ನಿವಾಸಿ ಭರಮಪ್ಪ ಗೊಂದಿ (45 ವರ್ಷ) ಅವರು ಬಾದಾಮಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಸೇವೆಯಲ್ಲಿದ್ದರು. ಲಾಕ್‌ಡೌನ್ ನಂತರ ವೇತನ ಸರಿಯಾಗಿ ಸಿಕ್ಕಿಲ್ಲವಂತೆ. ಆರ್ಥಿಕ ಹೊರೆ ಹೆಚ್ಚಾಗಿ, ಸಾಲದ ಸುಳಿಯಲ್ಲಿ ಸಿಲುಕಿದ್ದ ಇವರು ಅಕ್ಟೋಬರ್ 30ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆನ್ನಲಾಗಿದೆ. ಬಾಗಲಕೋಟೆಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಮೃತಪಟ್ಟಿದ್ದಾರೆನ್ನಲಾಗಿದೆ.