ತುಮಕೂರು: ಕೋವಿಡ್ ಸೋಂಕಿನ ಕಾರಣದಿಂದಾಗಿ ಸುಮಾರು ಎರಡು ವರ್ಷ ಸಂಕಷ್ಟ ಅನುಭವಿಸಿದ ಜನರ ಆರೋಗ್ಯ ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರು ಆಶಾದಾಯಕ ಸೇವೆ ಮಾಡಿದ್ದಾರೆ. ಈ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂಧಿಸಬೇಕಿದೆ ಎಂದು ಬಿಜೆಪಿ ಮುಖಂಡರಾದ ಡಾ. ನವ್ಯಾಬಾಬು ಪ್ರತಿಪಾದಿಸಿದ್ದಾರೆ.
ಕೊರೋನಾದಂತಹಾ ಸಂಕಷ್ಟ ಪರಿಸ್ಥಿತಿಯಲ್ಲಿ ದೊಡ್ಡ ಪಾತ್ರ ವಹಿಸಿದ ಆಶಾ ಕಾರ್ಯಕರ್ತೆಯರ ಸೇವೆ ನಿಜವಾದ ವಾರಿಯರ್ಸ್ ಎನಿಸಿದ್ದಾರೆ. ಅವರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಎಂದು ಜಿಪಂ ಮಾಜಿ ಸದಸ್ಯೆಯೂ ಆದ ಡಾ. ನವ್ಯಾಬಾಬು ಹೇಳಿದ್ದಾರೆ.
ಹಾಗಲವಾಡಿ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಬಿಜೆಪಿ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರ್ ಬಾಬು ಅವರ 51ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಮತ್ತು ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೋನಾ ವೇಳೆ, ನಿಸ್ವಾರ್ಥ ಸೇವೆ ಹಾಗೂ ಲಸಿಕೆಯನ್ನು ಮನೆ ಮನೆಗೆ ತೆರಳಿ ನೀಡಿ ಅಭಿಯಾನದ ಯಶಸ್ವಿಗೆ ಸಹಕರಿಸಿದ ಆಶಾ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ ಮತ್ತು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ನಾಯಕರು, ಆಶಾ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.