ಬೆಳಗಬೇಕು.. ಬೆಳಕಾಗಿರಬೇಕು.. ‘ಸಮರಸತೆಯ ಮಂತ್ರ’ ಮಾತ್ರವಲ್ಲ, ದೀಪದ ಬೆಳಕಿನ ಮುಂದೆ ಬೆಳಗುತ್ತಾ ಸಂಕಲ್ಪ ತೊಟ್ಟ ಸಂಘದ ಸೇನಾನಿಗಳು..
ಮಂಗಳೂರು: ಸಾಮಾಜಿಕ ಸಮರಸತೆ ಕಾಯ್ದುಕೊಳ್ಳುವಲ್ಲಿ ಹಾಗೂ ಸಾಮಾಜಿಕ ಅಸಮತೋಲನ ನಿವಾರಣೆಯ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ವಿಶೇಷ ಕಾರ್ಯಕ್ರಮವೊಂದು ನಾಡಿನ ಗಮನ ಸೆಳೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯಲ್ಲಿ ನಡೆದ ‘ತುಡರ್’ ಎಂಬ ಕಾರ್ಯಕ್ರಮ ಸಮಾಜದ ನಡುವೆ ‘ಬೆಳಕಾಗಿ’ ಹೆಗ್ಗುರುತಾಯಿತು.
ಏನಿದು ‘ತುಡರ್..’?
‘ತುಡರ್’ ಎಂದರೆ ದೀಪ. ಸಮಾಜದಲ್ಲಿ ಆವರಿಸಿರುವ ಅಸಮತೋಲನದ ಕತ್ತಲನ್ನು ತೊಲಗಿಸಲು ಆರೆಸ್ಸೆಸ್ ಕಾರ್ಯಕರ್ತರು ಬೆಳಕಿನ ಹಬ್ಬ ದೀಪಾವಳಿಯನ್ನು ‘ತುಡರ್’ ಎಂಬ ಹೆಸರಿನೊಂದಿಗೆ ಆಚರಿಸಿದರು.
ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ‘ತುಡರ್’ ಕಾರ್ಯಕ್ರಮ ನಡೆಯಿತು. ಪೊಳಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಳಗುತ್ತಿದ್ದ ದೀಪದಿಂದ ಹಚ್ಚಿದ ಜ್ಯೋತಿಯನ್ನು ಸಂಘದ ಪ್ರಮುಖರಿಗೆ ನೀಡಲಾಯಿತು. ಈ ದೀಪವನ್ನು ಉಪೇಕ್ಷಿತರ ಕಾಲೋನಿಯ ಕುಟುಂಬ ಪಡೆದು, ನಂತರ ಪೊಳಲಿಯಿಂದ ಈ ದೀಪವನ್ನು ಸಾಣೂರು ಪದವು ಎಂಬಲ್ಲಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅಲ್ಲಿ ಉಪೇಕ್ಷಿತರ ಕಾಲೋನಿಯಲ್ಲಿ ಬೆಳಗಿಸಿ ದೀಪಾವಳಿ ಆಚರಿಸಲಾಯಿತು.
ಈ ಕಾರ್ಯಕ್ರಮವು ಇಡೀ ಊರಿಗೆ ಹಬ್ಬದಂತೆ ಭಾಸವಾಯಿತು. ಘಂಟೆ, ಜಾಗಟೆ ಜೊತೆಗೆ ‘ದೀಪ’ವನ್ನು ಹೊತ್ತೊಯ್ದ ಯುವಜನಸಮೂಹ ಸಮಾನತೆಯ ವಿಚಾರದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದರು. ದೀಪವಳಿಯ ಸಿರಿವಂತ ಹಬ್ಬದ ನಡುವೆ ಈ ‘ತುಡರ್’ ಸಮಾಜಕ್ಕೊಂದು ವಿಶೇಷ ಸಂದೇಶವನ್ನೇ ನೀಡಿತೆಂಬ ತೃಪ್ತಿ ಸಂಘದ ಕಾರ್ಯಕರ್ತರದ್ದು.
ಪೊಳಲಿಯ ಶ್ರೀ ರಾಮಕೃಷ್ಣ ತಪೋವನದ ಸ್ವಾಮೀಜಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಆರೆಸ್ಸೆಸ್‌ನ ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ ಕೊಡಮನ್, ಕರ್ನಾಟಕ ದಕ್ಷಿಣ ಪ್ರಾಂತ ಟೋಳಿ ಸದಸ್ಯ ಸುನಿಲ್ ಕುಲಕರ್ಣಿ, ಕಾಲೋನಿ ಹಿರಿಯರಾದ ಗಣೇಶ್, ಬಿಜೆಪಿ ಬಂಟ್ವಾಳ ಘಕದ ಅಧ್ಯಕ್ಷ ದೇವಪ್ಪ ಪೂಜಾರಿ, ಬಿಜೆಪಿ ಮುಖಂಡರಾದ ವೆಂಕಟೇಶ್ ನವಡ, ಜಿಲ್ಲಾ ಸಾಮರಸ್ಯ ಸಾಯೋಜಕ್ ಯೋಗೀಶ್ ಮಾಣಿ, ಬಂಟ್ವಾಳ ತಾಲೂಕು ಧರ್ಮಜಾಗರಣ ಸಾಯೋಜಕ್ ಸಂದೀಪ್ ಕಮ್ಮಾಜೆ, ಯುವರಾಜ್ ಪೂಂಜಾ ಈ ವೇಳೆ ಉಪಸ್ಥಿತರಿದ್ದರು.
ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಕಿಶೋರ್ ಪಲಿಪಾಡಿ, ಸನತ್ ಅಮುಂಜೆ, ಜಯಂತ್ ಮಣಿಕಂಠಪುರ, ಪ್ರೀತಮ್ ಬಡಕಬೈಲ್, ಯಶವಂತ ಪೊಳಲಿ, ಲೋಕೇಶ್ ಲಚ್ಚಿಲ್, ಪ್ರೇಮ್ ಕರಿಯಂಗಳ, ಚಂದ್ರಶೇಖರ್ ಕಂಡದಬೆಟ್ಟು ಸಹಿತ ಹಿಂದೂ ಸಂಘಟನೆಗಳ ಪ್ರಮುಖರನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.