ಬೆಂಗಳೂರು: ಬೆಂಗಳೂರಿನಲ್ಲಿ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ಶಿಪ್ 2026ಕ್ಕೆ ಭಾನುವಾರ ಅದ್ಧೂರಿ ಚಾಲನೆ ದೊರೆಯಿತು. ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಜಿ. ಪರಮೇಶ್ವರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಚಾಂಪಿಯನ್ಶಿಪ್ನ ಮೊದಲ ದಿನ ಪುರುಷರು ಮತ್ತು ಮಹಿಳೆಯರ ವಿವಿಧ ವಯೋಮಿತಿ ವಿಭಾಗಗಳಲ್ಲಿ 50 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಗಳು ನಡೆದವು. ಭಾರತ ಸೇರಿದಂತೆ ಏಷ್ಯಾದ ವಿವಿಧ ರಾಷ್ಟ್ರಗಳ ಈಜುಪಟುಗಳು ಅಗ್ರಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದರು.
ಪುರುಷರ 25–29ರ ವಯೋಮಿತಿ ವಿಭಾಗದಲ್ಲಿ ಜೈ ಪ್ರಕಾಶ್ ಏಕ್ಬೋಟೆ 29.44 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಶುಭಂ ಉಪಾಧ್ಯಾಯ (30.12 ಸೆಕೆಂಡು) ಬೆಳ್ಳಿ ಹಾಗೂ ಯಶ್ ವಿಕಾಸ್ ಬಗ್ವೆ (32.10 ಸೆಕೆಂಡು) ಕಂಚಿನ ಪದಕ ಪಡೆದರು. 40–44ರ ವಿಭಾಗದಲ್ಲಿ ಅಂಕಿತ್ ಸೋಮಾನಿ 32.68 ಸೆಕೆಂಡುಗಳಲ್ಲಿ ಮೊದಲ ಸ್ಥಾನ ಪಡೆದರೆ, ಶ್ರೀಕಾಂತ್ ಪಾಲಂಡೆ ಮತ್ತು ಇರಾನ್ನ ಸೈಯದ್ ಅಲಿ ಝಹೇದಿ ಕ್ರಮವಾಗಿ ನಂತರದ ಸ್ಥಾನಗಳನ್ನು ಗಳಿಸಿದರು. 65–69ರ ವಿಭಾಗದಲ್ಲಿ ಸುರೇಂದ್ರ ನಾಯಕ್ 47.04 ಸೆಕೆಂಡುಗಳಲ್ಲಿ ಚಿನ್ನ ಗೆದ್ದರು.

ಮಹಿಳೆಯರ 25–29ರ ವಿಭಾಗದಲ್ಲಿ ಆರತಿ ಬಾಜಿರಾವ್ ಪಾಟೀಲ್ 38.16 ಸೆಕೆಂಡುಗಳಲ್ಲಿ ಮೊದಲ ಸ್ಥಾನ ಪಡೆದರು. ಅದಿತಿ ಅವಿನಾಶ್ ನಿಲಂಗೇಕರ್ ಬೆಳ್ಳಿ ಹಾಗೂ ಥೈಲ್ಯಾಂಡ್ನ ಸಿರಿಮೋನ್ ಕಲುಂಪಾನಂತ್ ಕಂಚಿನ ಪದಕ ಗೆದ್ದರು. 40–44ರ ವಿಭಾಗದಲ್ಲಿ ವರುಣಾ ಮಯ್ಯ 45.91 ಸೆಕೆಂಡುಗಳಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 65–69ರ ವಿಭಾಗದಲ್ಲಿ ಶ್ರೀಲಂಕಾದ ಶಾಲಿನಿ ವಿಕ್ರಮಸೂರ್ಯ 57 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಜೇತರಾದರು. ಭಾರತದ ಪ್ರಸನ್ನಕುಮಾರಿ ಬೆಳ್ಳಿ ಹಾಗೂ ಸುಮನ್ ಚೌಧರಿ ಕಂಚಿನ ಪದಕ ಪಡೆದರು.
ಅ. 4ರಿಂದ 10ರವರೆಗೆ ನಡೆಯಲಿರುವ ಈ ಚಾಂಪಿಯನ್ಶಿಪ್ನಲ್ಲಿ ಏಷ್ಯಾದ ವಿವಿಧ ರಾಷ್ಟ್ರಗಳ ಮಾಸ್ಟರ್ಸ್ ಈಜುಪಟುಗಳು ಭಾಗವಹಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪ್ರದರ್ಶನದ ಜತೆಗೆ ಕ್ರೀಡೆಯಲ್ಲಿ ನಿರಂತರ ಭಾಗವಹಿಸುವಿಕೆ ಹಾಗೂ ಈಜಿನೊಂದಿಗಿನ ಜೀವಮಾನದ ಒಡನಾಟವನ್ನು ಸಂಭ್ರಮಿಸುವ ವೇದಿಕೆಯಾಗಿಯೂ ಈ ಕೂಟ ಗಮನ ಸೆಳೆಯುತ್ತಿದೆ.















































































