ಬೆಂಗಳೂರು: ಬಿಜೆಪಿ ಶಾಸಕ ಸಿ.ಟಿ.ರವಿ ಮೇಲೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುಮಾರು ನಲ್ವತ್ತು- ಐವತ್ತು ಜನ ಹಲ್ಲೆ ಮಾಡಿ ಕೊಲೆ ಯತ್ನ ನಡೆದಿದೆ. ಇದರಲ್ಲಿ ಸಚಿವರು ಮತ್ತು ಅವರ ಪಿಎ ಪಾತ್ರ ಇದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಅದೇ ಠಾಣೆಯಲ್ಲಿ ಎಫ್ಐಆರ್ ಮಾಡಬೇಕೆಂದು ಆಗ್ರಹಿಸಿದ್ದೆವು. ನಮ್ಮನ್ನು ಖಾನಾಪುರ ಪೊಲೀಸ್ ಠಾಣೆಯಲ್ಲಿ ಸುಮಾರು ಐದು ಗಂಟೆಗಳ ಕಾಲ ಕಾಯಿಸಿ, ನಂತರ ದೂರು ಸ್ವೀಕರಿಸಿದ್ದಾರೆ ಎಙದು ಪೊಲೀಸರ ನಡೆಗೆ ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರಕ್ಕೆ ಬುದ್ಧಿ ಭ್ರಮಣೆಯಾಗಿದೆ. ಪೊಲೀಸ್ ಠಾಣೆಗಳು ಸುರಕ್ಷಿತ ಅಲ್ಲ. ಯಾರಾದರೂ ಅಪರಾಧಿಯನ್ನು ಬಂಧಿಸಿದರೆ ಅವರನ್ನು ಕಬ್ಬಿನಗದ್ದೆಯಲ್ಲಿ ಇರಿಸಬೇಕು ಎಂದು ರೂಲ್ಸ್ ಮಾಡಿದ್ದಾರೆ. ಗೃಹ ಸಚಿವರನ್ನು ಏನೂ ಕೇಳಿದರೂ ನನಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಅಶೋಕ್ ದೂರಿದರು.