ಚಾಮರಾಜನಗರ : ಅವಿಭಾಜಿತ ಚಾಮರಾಜನಗರ -ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಹೆಚ್ಚಿನ ಒತ್ತು ನೀಡಿದ್ದಾರೆ .ಈ ಹಿನ್ನೆಲೆ ಚಾಮರಾಜನಗರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ರವರಿಗೆ ಶಕ್ತಿ ತುಂಬಿದರೆ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.
ಹನೂರು ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯನವರು ಬಡವರು ಹಿಂದುಳಿದವರು ಶೋಷಿತ ವರ್ಗದವರ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಭರವಸೆಗಳನ್ನು ಕಳೆದ 9 ತಿಂಗಳ ಅವಧಿಯಲ್ಲಿ ಕೊಟ್ಟ ಮಾತಿನಂತೆ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಮನೆಯ ಯಜಮಾನ ನಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ, ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆ ಅಡಿ ಐದು ಕೆಜಿ ಅಕ್ಕಿ, ಹೆಚ್ಚುವರಿ 5 ಕೆ.ಜಿ ಅಕ್ಕಿಗೆ ತಗಲುವ ಹಣ, ಯುವನಿಧಿ ಯೋಜನೆ ಯಡಿ ನಿರುದ್ಯೋಗಿ ವಿದ್ಯಾವಂತರಿಗೆ 3000 ಸಹಾಯಧನ, ಗೃಹಜೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ನೀಡಲಾಗುತ್ತಿದೆ ಇದು ಜನಪರ ಕಾಳಜಿ ಇರುವ ಕಾಂಗ್ರೆಸ್ ಸರ್ಕಾರದಿಂದ ಈ ಯೋಜನೆಗಳನ್ನು ನೀಡಲಾಗುತ್ತಿದೆ ಎಂದರು. ಈ ಹಿಂದೆ ಲೋಕ ಉಪಯೋಗಿ ಸಚಿವರಾಗಿದ್ದಾಗ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ, ಮುಂದಿನ ದಿನಗಳಲ್ಲಿ ಮಾಜಿ ಶಾಸಕ ಆರ್ ನರೇಂದ್ರ ರವರಿಗೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಮಾತನಾಡಿ ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ನ ಭದ್ರಕೋಟೆ ಅದನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಬೇಕು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರಿಗೆ 10 ವರ್ಷದಲ್ಲಿ ಯಾವ ಯೋಜನೆಯನ್ನು ಕೊಟ್ಟಿದೆ ಎಂದು ವಿಮರ್ಶೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಈ ಹಿಂದೆಯಿಂದ ಬಿಜೆಪಿ ಸರ್ಕಾರ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಹಲವು ಕಾರ್ಯಕ್ರಮಗಳನ್ನು ನಿಲ್ಲಿಸಿರುವುದೇ ಇವರ ಸಾಧನೆ. ಬಿಜೆಪಿಯವರು ಅಭಿವೃದ್ಧಿ ವಿಚಾರ ಚರ್ಚೆ ಮಾಡದೆ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ದೇಶದಲ್ಲಿ ೪೦೦ ಸಂಸತ್ ಸದಸ್ಯರನ್ನು ಆಯ್ಕೆ ಮಾಡಿದ್ದೆ ಆದರೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯುವುದಿಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ ಕಳೆದ ಚುನಾವಣೆಯಲ್ಲಿ ನಾವು ಯಾವ ರೀತಿ ಪರಾಭವ ಕೊಂಡಿದ್ದೇನೆ ಎಂಬುದು ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ತಿಳಿದಿರುವ ವಿಚಾರ, ಹನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ ಹೊರಗಡೆಯಿಂದ ಬಂದವರು ಹನೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಕಳೆದ ಒಂದು ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಅಭಿವೃದ್ಧಿ ಕುಂಠಿತವಾಗಿದೆ. ರೈತರ ಪರ ಕಾಳಜಿ ಇದ್ದರೆ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 6 ಕೋಟಿ ಅನುದಾನ ತಂದಿದ್ದರೆ ರಾಮನ ಗುಡ್ಡ ಹಾಗೂ ಹುಬ್ಬೆ ಹುಣಸೆ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಬಹುದಾಗಿತ್ತು ಎಂದು ವಾಗ್ದಾಳಿ ನಡೆಸಿದರು. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆ ಈ ಬಾರಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಗೆ 25 ಸಾವಿರ ಮತಗಳ ಅಂತರ ನೀಡಲು ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ಮುಟ್ಟಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಮಾತನಾಡಿ 2018 ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಹಾಕಲಿರುವ ಶ್ರಮಿಸುತ್ತಿದ್ದೇನೆ ನಾನು ಎರಡು ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದೆ ಆದರೆ ನನಗೆ ಅವಕಾಶ ದೊರೆತಿರಲಿಲ್ಲ, ಇದೀಗ ಪಕ್ಷ ನನ್ನ ಸಂಘಟನೆಯನ್ನು ಮೆಚ್ಚಿ ಟಿಕೆಟ್ ನೀಡಿದೆ. ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿರುವುದಕ್ಕೆ ಅವರಿಗೆ ಆಭಾರಿಯಾಗಿದ್ದೇನೆ ನಾನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದಡಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ನಿಮ್ಮ ಸೇವಕನಾಗಲು ಬಯಸಿದ್ದೇನೆ. ಕ್ಷೇತ್ರದ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ನೀಡಿ ನನ್ನನ್ನು ಜಯಶೀಲರನ್ನಾಗಿ ಮಾಡಲು ತಾವು ಸಹಕಾರ ನೀಡಬೇಕು ಎಂದು ಕೈಮುಗಿದು ಪ್ರಾರ್ಥನೆ ಮಾಡಿದರು.
ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ ಮಾತನಾಡಿ ನಾನು ಲೋಕಸಭಾ ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿ ಕಳೆದ ಒಂದು ವರ್ಷದಿಂದ ನಾಯಿ ರೀತಿ ಸುತ್ತಿದ್ದೆ ಆದರೆ ಹಿರಿಯರ ಆದೇಶದಂತೆ ಯುವಕ ಸುನೀಲ್ ಬೋಸ್ ರವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ ಪಕ್ಷದ ನಾಯಕರು ನನಗೆ ಮೋಸ, ದ್ರೋಹ ಮಾಡಬೇಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಎಆರ್ ಕೃಷ್ಣಮೂರ್ತಿ, ಡಾ. ತಿಮ್ಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್, ಕೆಪಿಸಿಸಿ ಸದಸ್ಯ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್ ಮುಕುಂದವರ್ಮ, ಚಾಮುಲ್ ನಿರ್ದೇಶಕರಾದ ನಂಜುಂಡಸ್ವಾಮಿ, ಶಾಹುಲ್ ಅಹಮದ್, ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್, ಸುದೇಶ್ ಗಿರೀಶ್, ಸಂಪತ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್, ಮುಖಂಡರಾದ ನವನೀತ್ ಗೌಡ, ಕಿಟ್ಟಪ್ಪ, ಎಲ್ ನಾಗೇಂದ್ರ, ಮಾದೇಶ್, ಅಜ್ಜಿಪುರ ನಾಗರಾಜು, ಮುರುಡೇಶ್ವರ ಸ್ವಾಮಿ ಮಂಗಲ ಪುಟ್ಟರಾಜು, ಕೊಪ್ಪಳಿ ಮಹದೇವ ನಾಯಕ್, ಪಾಳ್ಯ ಕೃಷ್ಣ, ಗುಂಡಾಪುರ ಮಾದೇಶ್, ರಮೇಶ್ , ರಾಜೇಶ್, ಅಶ್ವಿನ್, ಯೂತ್ ಕಾಂಗ್ರೆಸ್ ಹನೂರು ಟೌನ್ ಅಧ್ಯಕ್ಷರು ಮಂಜೇಶ್, ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.