ಬೆಂಗಳೂರು: ಕೋವಿಡ್ ಸೋಂಕಿನಿಂದ ರಾಜ್ಯದ ಜನ ಕಂಗಾಲಾಗಿದ್ದಾರೆ. ಈ ಸೋಂಕು ಶರವೇಗದಲ್ಲಿ ಹರಡುತ್ತಿದ್ದು ಸೋಂಕಿನ ಸರಪಳಿಯನ್ನು ತುಂಡರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಲಾಕ್‌ಡೌನ್ ರೀತಿಯ ಕಠಿಣ ನಿಯಮವನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ವಾಹನಗಳ ಅನಗತ್ಯ ಸಂಚಾರಕ್ಕೆ ಈಗಲೇ ಬ್ರೇಕ್ ಹಾಕುವ ಸನ್ನಿವೇಶ ಅಲ್ಲಲ್ಲಿ ಕಂಡುಬರುತ್ತಿದೆ.
ಮಾರ್ಗ ಸೂಚಿ ಜಾರಿಯಲ್ಲಿದ್ದರೂ ಜನರ ನಿರ್ಲಕ್ಷ್ಯ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಅಖಾಡಕ್ಕೆ ಧುಮುಕಿರುವ ಪೊಲೀಸರು ಅನಗತ್ಯವಾಗಿ ಓಡಾಡುತ್ತಿರುವವರನ್ನು ಪತ್ತೆಹಚ್ಚಿ ತರಾಟೆಗೆ ತೆದುಕೊಳ್ಳುತ್ತಿದ್ದಾರೆ.
ನಾಳೆಯಿಂದ ಮತ್ತಷ್ಟು ಟಫ್ ರೂಲ್ಸ್..
ಪ್ರಸ್ತುತ ಮೇ 12ರವರೆಗೆ ಟಫ್ ರೂಲ್ಸ್ ಜಾರಿಯಲ್ಲಿದೆ. ಆದರೂ ರಾಜ್ಯ ಸರ್ಕಾರ ಶುಕ್ರವಾರ ತುರ್ತು ತೀರ್ಮಾನವನ್ನು ಕೈಗೊಂಡು ಮೇ 10ರಿಂದಲೇ ಇನ್ನಷ್ಟು ಕಠಿಣ ನಿಯಮ ಜಾರಿಗೆ ತರುವ ಸಂಬಂಧ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಈ ನಡುವೆ ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳ ಓಡಾಟ ಕಂಡುಬರುತ್ತಿತ್ತು. ಈ ವಾಹನಗಳನ್ನು ತಡೆಹಿಡಿದ ಪೊಲೀಸರು ಅನಗತ್ಯ ಸಂಚಾರ ಕೈಗೊಂಡವರನ್ನು ಪತ್ತೆಹಚ್ಚಿ, ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಶನಿವಾರ ಒಂದೇ ದಿನ ಬೆಂಗಳೂರಿನಲ್ಲಿ ಸುಮಾರು 3 ಸಾವಿರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪೊಲೀಸ್ ಇಲಾಖೆ, ಬೆಂಗಳೂರು ನಗರದಲ್ಲಿ ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 10-00 ರಿಂದ ರಾತ್ರಿ 08-00 ಗಂಟೆಯವರೆಗೆ 2723 ದ್ವಿಚಕ್ರ, 171 ತ್ರಿಚಕ್ರ & 106 ನಾಲ್ಕು ಚಕ್ರದ ವಾಹನಗಳು ಸೇರಿ ಒಟ್ಟು 3000 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 24 ಎನ್.ಡಿ.ಎಂ.ಎ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.
ಇಂದು ಬೆಂಗಳೂರು ನಗರದಲ್ಲಿ ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 10-00 ರಿಂದ ರಾತ್ರಿ 08-00 ಗಂಟೆಯವರೆಗೆ 2723 ದ್ವಿಚಕ್ರ, 171 ತ್ರಿಚಕ್ರ & 106 ನಾಲ್ಕು ಚಕ್ರದ ವಾಹನಗಳು ಸೇರಿ ಒಟ್ಟು 3000 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 24 ಎನ್.ಡಿ.ಎಂ.ಎ ಪ್ರಕರಣಗಳನ್ನು ದಾಖಲಿಸಲಾಗಿದೆ.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) May 8, 2021
ಇದೇ ವೇಳೆ, ಸುಳ್ಳು ನೆಪಗಳನ್ನು ಹೇಳುತ್ತಾ ಕಾನೂನು ಉಲ್ಲಂಘಿಸುವವರ ವಿರುದ್ದಾ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯ ಸಂದೇಶವನ್ನು ಪೊಲೀಸ್ ಅಧಿಕಾರಿಗಳು ರವಾನಿಸಿದ್ದಾರೆ.