ಸಚಿವ ನಿರಾಣಿ ಅವರ ಸೂಚನೆಗೆ ಸೈ ಎಂದ ಅಧಿಕಾರಿಗಳು.. ಫಾಗಿಂಗ್‌ಗೆ ಸಾಕ್ಷಿಯಾದ ಅಫಜಲಪುರ.. ಸೋಕು ತಡೆ, ಮುನ್ನೆಚ್ಚರಿಕೆ ಕ್ರಮಕ್ಕೆ ಮುನ್ನುಡಿ..
ಕಲಬುರಗಿ: ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ
ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರ ಸೂಚನೆಯಂತೆ ಫಾಗಿಂಗ್ (ರಾಸಾಯನಿಕ ಸಿಂಪಡಣೆ) ಮಾಡಲಾಗಿದ್ದು,ಸ್ವಚ್ಛತೆಗೆ ಗಮನಹರಿಸಲಾಗಿದೆ.
ವಿಶೇಷವೆಂದರೆ ಶನಿವಾರವಷ್ಟೆ ಅಫಜಲ್ಪುರ ತಾಲ್ಲೂಕಿನ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವ ನಿರಾಣಿ ಅವರು ,ಇಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದರು. ಎರಡು ದಿನಗಳೊಳಗೆ ಇಲ್ಲಿನ ಸರಕಾರಿ ಆಸ್ಪತ್ರೆ, ಕಚೇರಿಗಳು, ಸಾವ೯ಜನಿಕ ಸ್ಥಳಗಳು, ಪ್ರಮುಖ ಬೀದಿಗಳು ಪಟ್ಟಣದದ್ಯಾಂತ ಫಾಗಿಂಗ್ ಮಾಡಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ, ಸಿಬ್ಬಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದರು.
ಸಚಿವರು ಸೂಚನೆ ಕೊಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಿಬ್ಬಂದಿಗಳು ಶನಿವಾರ ರಾತ್ರಿಯೇ ಆಸ್ಪತ್ರೆ ಸೇರಿದಂತೆ ನಗರದ ಎಲ್ಲಾ ಕಡೆಯು ಫಾಗಿಂಗ್ ಆರಂಭಿಸಿದ್ದಾರೆ.
ಪಟ್ಟಣದಲ್ಲಿ ಸ್ವಚ್ಚತೆ ಇಲ್ಲದಿದ್ದರೆ ರೋಗ ರುಜನಿಗಳು ಹಬ್ಬಿ, ಸಾಂಕ್ರಾಮಿಕ ರೋಗಗಳು ಬರುತ್ತವೆ. ಮೊದಲೇ ಕೊರೊನಾ ಎರಡನೇ ಆಲೆ ಅಪ್ಪಳಿಸಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಡಲೇ ಪಟ್ಟಣದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು. ಸೋಂಕಿತರಿಗೆ ಅಗತ್ಯವಿರುವ ರೆಮಿಡಿಸಿವರ್ ಲಸಿಕೆ, ಬೆಡ್ , ಐಸಿಯೂ ಬೆಡ್, ಅಗತ್ಯವಿರುವ ಅಕ್ಸಿಜನ್ ಸಿಲಿಂಡರ್,ತಿಂಡಿ, ಉಟ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡುವಂತೆ ಸ್ಥಳದಲ್ಲಿದ್ದ ವೈದ್ಯರಿಗೆ ಸೂಚನೆ ನೀಡಿದ್ದರು .
ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ಸೋಂಕಿತರು ಸವಲತ್ತುಗಳಿಂದ ವಂಚಿತರಾಗಬಾರದು. ಅಗತ್ಯವಿರುವುದನ್ನು ಮೊದಲೇ ಸಂಗ್ರಹಿಸಿಕೊಳ್ಳಬೇಕು. ಯಾವುದೇ ರೀತಿಯ ಸಮಸ್ಯೆಗಳು ಇದ್ದರೆ ತಕ್ಷಣವೇ ಜಿಲ್ಲಾಡಳಿತದ ಗಮನಕ್ಕೆ ತರಬೇಕೆಂದು ಹೇಳಿದ್ದರು. ಈ ಸೂಚನೆಯು ಅಧಿಕಾರಿಗಳ ಪಾಳಯದಲ್ಲಿ ಸಂಚಲನ ಮೂಡಿಸಿದೆ.