ಶ್ರೀನಗರ: ಸಾರಸ್ವತರ ನಾಡು ಕಾಶ್ಮೀರದಲ್ಲಿ ಜಗದೋದ್ಧಾರದ ಮಹಾ ಕೈಂಕರ್ಯ ರಾಷ್ಟ್ರದ ಗಮನಸೆಳೆದಿದೆ. ಕರುನಾಡಿನ ಯತಿಗಳು, ಧಾರ್ಮಿಕ ಪ್ರಮುಖರು ಹಾಗೂ ಆಸ್ತಿಕ ಸಮೂಹದ ಜೊತೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಕೈಂಕರ್ಯ ನೆರವೇರಿಸಿದ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥರು ಶ್ರೀನಗರದ ಶ್ರೀ ಅಮೃತೇಶ್ವರ ಭೈರವ ದೇವಸ್ಥಾನದ ಆವರಣದಲ್ಲಿ ಸರಸ್ವತಿ ಸೂಕ್ತ ಯುಕ್ತ ಚಂಡಿಕಾ ಹವನ ನೆರವೇರಿಸಿದರು.
ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿಯಲ್ಲಿ ಶ್ರೀನಗರದ ಶ್ರೀ ಅಮೃತೇಶ್ವರ ಭೈರವ ದೇವಸ್ಥಾನದ ಆವರಣದಲ್ಲಿನ ಭವ್ಯ ಯಜ್ಞ ಮಂಟಪದಲ್ಲಿ ವಿವಿಧ ಗೋತ್ರೆಯ ವೈದಿಕರಿಂದ ನಡೆದ “ಸರಸ್ವತಿ ಸೂಕ್ತ ಯುಕ್ತ ಚಂಡಿಕಾ ಹವನ” ಆಸ್ತಿಕ ಸಮೂಹದ ಕುತೂಹಲದ ಕೇಂದ್ರಬಿಂದುವಾಯಿತು. ಮಹಾ ಪೂರ್ಣಾಹುತಿಯೂ ಶ್ರೀಗಳ ಅಮೃತ ಹಸ್ತಗಳಿಂದ ನೆರವೇರಿತು .
ಜಗದೋದ್ದಾರಕ್ಕಾಗಿ ಮಹಾ ಕೈಂಕರ್ಯ..
ಜಮ್ಮು ಕಾಶ್ಮೀರಕ್ಕೆ ಶ್ರೀ ಕಾಶೀ ಮಠಾಧೀಶರ ಚಾರಿತ್ರಿಕ ಭೇಟಿ ನೀಡಿದ ಸಂದರ್ಭದಲ್ಲಿ ಕಾಶ್ಮೀರದ ಅತ್ಯಂತ ಪುರಾತನ ದೇವಾಲ ಯಗಳಾದ ವೈಷನೋ ದೇವಿ ದೇವಸ್ಥಾನಕ್ಕೆ ತೆರಳಿ ಕೈಂಕರ್ಯದಲ್ಲಿ ಭಾಗಿಯಾದರು. ಕಣಿವೆ ರಾಜ್ಯದ ಖೀರ್ ಭವಾನಿ ದೇವಸ್ಥಾನ, ಮಾರ್ಥಂಡ ಸೂರ್ಯ ದೇವಸ್ಥಾನ , ಪಂಚಮುಖಿ ಹನುಮಂತ ದೇವಸ್ಥಾನ, ಅವಂತೀಪುರ ದೇವಸ್ಥಾನ , ತ್ರಿಪುರ ಸುಂದರಿ ದೇವಸ್ಥಾನ, ಶೈಲಪುತ್ರಿ ದೇವಸ್ಥಾನ, ಜಮ್ಮು ಶ್ರೀ ರಘುನಾಥ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಕೌಗೊಂಡರು. ಕಣಿವೆ ರಾಜ್ಯದಲ್ಲಿ ಸಾರಸ್ವತ ಸಮಾಜದ ಪೂರ್ವಜರ ನೆಲೆಗಳ, ಇತಿಹಾಸದ ಕುರಿತಂತೆ ತಿಳಿದುಕೊಂಡು, ಸ್ಥಳೀಯ ಪ್ರಮುಖರ ಜೊತೆ ಸಮಾಜದ ಸಾರಸ್ವತ ಸಮಾಜದ ಪ್ರಸ್ತುತ ಸ್ಥಿತಿಗತಿ ,ಸವಾಲುಗಳು ಮತ್ತು ಅವರ ವಲಸೆಗೆ ಕಾರಣವಾದ ಅಂಶಗಳ ಕುರಿತು ಚರ್ಚಿಸಿದರು. ಈ ಪ್ರವಾಸ ಸಂದರ್ಭದಲ್ಲೇ ಶ್ರೀಗಳು ದೇಶದ ಒಲಿತಿಗಾಗಿ, ಮನುಕುಲದ ಉದ್ಧಾರಕ್ಕಾಗಿ ಈ ಮಹಾ ಯಜ್ಞ ಕೈಗೊಂಡು ದೇಶದ ಗಮನಸೆಳೆದರು.
ಚಿತ್ರ : ಮಂಜು ನೀರೇಶ್ವಾಲ್ಯ